ಪೈಚಾರು: ಆರ್ತಾಜೆಯ ಎರಡು ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ

0

ಜಾಲ್ಸೂರು ಗ್ರಾಮದ ಪೈಚಾರಿನ ಆರ್ತಾಜೆಯಲ್ಲಿ ಎತ್ತರದ ಪ್ರದೇಶದಲ್ಲಿರುವ ಎರಡು ಮನೆಗಳಿಗೆ ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಶಾಶ್ವತ ಪರಿಹಾರ ಒದಗಿಸುವಂತೆ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ನ.ಪಂ. ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಅವರ ಮುಖಾಂತರ ಜಾಲ್ಸೂರು ಗ್ರಾ.ಪಂ.ಗೆ ಮನವಿ ಮಾಡಲಾಗಿದೆ. ಆರ್ತಾಜೆಯ ಅರುಣ ಮತ್ತು ಅಲಿಮಾ ಎಂಬವರ ಎರಡು ಮನೆಗಳು ಎತ್ತರ ಪ್ರದೇಶದಲ್ಲಿದ್ದು, ಅಲ್ಲಿಗೆ ಗ್ರಾ.ಪಂ. ವತಿಯಿಂದ ಕಳೆದ ಮೂರು ತಿಂಗಳಿನಿಂದ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಬರುತ್ತಿಲ್ಲವೆನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ನಿವಾಸಿಗಳು ಬಟ್ಟೆ ತೊಳೆಯಲು, ವಾರದಲ್ಲಿ ಮೂರ್ನಾಲ್ಕು ಬಾರಿ ದೂರದ ಪಯಸ್ವಿನಿ ನದಿಗೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿವಾಸಿಗಳಿಗೆ ಸಮೀಪದ ಮನೆಯ ನವೀನ ಎಂಬವರು ಕುಡಿಯಲು ಮತ್ತು ಅಡಿಗೆಗೆ ಬೇಕಾದ ನೀರನ್ನು ಒದಗಿಸುತ್ತಿದ್ದಾರೆ. ಈ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ , ನ.ಪಂ.‌ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಜಲಜೀವನ್ ಇಂಜಿನಿಯರ್ ಜನಾರ್ದನ ಅವರು ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಈ ಬಗ್ಗೆ ಈಗಾಗಲೇ ಇಂಜಿನಿಯರ್ ಅವರೊಂದಿಗೆ ಮಾತನಾಡಿದ್ದು, ಅಲ್ಲಿಗೆ ಪೈಪ್ ಅಳವಡಿಸಿ, ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಹೇಳಲಾಗಿದೆ ಎಂದು ಜಾಲ್ಸೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಅವರು ತಿಳಿಸಿದ್ದಾರೆ. ಗ್ರಾ.ಪಂ. ಸದಸ್ಯ ಮುಜೀಬ್ ಪೈಚಾರು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.