ನಿವೃತ್ತ ಯೋಧ ಅಡ್ಡಂತಡ್ಕ‌ ದೇರಣ್ಣ ಗೌಡರ ಮೇಲೆ ಹಲ್ಲೆ ಪ್ರಕರಣ – ಆರೋಪ ಸಾಬೀತು : ಆರೋಪಿಗೆ ಶಿಕ್ಷೆ ವಿಧಿಸಿದ ಸುಳ್ಯ ನ್ಯಾಯಾಲಯ

0

ನಿವೃತ್ತ ಯೋಧ, ಸುಳ್ಯ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಅಡ್ಡಂತಡ್ಕ‌ದೇರಣ್ಣ ಗೌಡರ ಮೇಲೆ ಹಲ್ಲೆ‌ ನಡೆಸಿದ ಪ್ರಕರಣ ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಪ್ರಕರಣದ ಆರೋಪಿಗೆ ಸುಳ್ಯ‌ ನ್ಯಾಯಾಲಯ ಶಿಕ್ಷೆ ವಿಧಿಸಿರುವುದಾಗಿ ತಿಳಿದುಬಂದಿದೆ.

2018ರ ನ. 20 ರಂದು ಬೆಳಿಗ್ಗೆ ಮಂಡೆಕೋಲು ಗ್ರಾಮದ ಪೇರಾಲು ಎಂಬಲ್ಲಿ ಮಾಜಿ ಸೈನಿಕರಾದ ಅಡ್ಡಂತಡ್ಕ ದೇರಣ್ಣ ಗೌಡರು ಪೇರಾಲು ಅಂಚೆ ಕಚೇರಿಯ ಬಳಿ ರಸ್ತೆಯಲ್ಲಿ ನಿಂತುಕೊಂಡಿದ್ದ ಸಮಯ ನಾಗೇಶ ಎಂಬವರು ಹಿಂಬದಿಯಿಂದ ಬಂದು ಏಕಾಏಕಿ ಅವ್ಯಾಚ್ಯ ಶಬ್ದಗಳಿಂದ ಬೈದು ಮರದ ದೊಣ್ಣೆಯಿಂದ ದೇರಣ್ಣ ಗೌಡರ ತಲೆಗೆ ಹೊಡೆದುದಲ್ಲದೆ, ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಒಡ್ಡಿದ್ದು ಹಲ್ಲೆಯ ಪರಿಣಾಮ ದೇರಣ್ಣ ಗೌಡರಿಗೆ ಗಾಯವಾಗಿತ್ತು.

ದೇರಣ್ಣ ಗೌಡರು ಪಂಚಾಯತ್ ಸದಸ್ಯರಾಗಿದ್ದ ಸಮಯದಲ್ಲಿ ಮಂಡೆಕೋಲು ಪಂಚಾಯತ್ ಗೆ ಕಾಯ್ದಿರಿಸಿದ ಜಾಗವನ್ನು ನಾಗೇಶರು ತನ್ನ ಹೆಸರಿಗೆ ಅಕ್ರಮವಾಗಿ ಮಾಡಿಸಿಕೊಂಡಿರುವುದಾಗಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ನಿರಂತರ ಹೋರಾಟ ನಡೆಸುತ್ತಿರುವ ಕಾರಣಕ್ಕೆ ದ್ವೇಷಗೊಂಡು ಈ ಕೃತ್ಯ ನಡೆಸಿದ್ದಾಗಿದೆ ಎಂದು ಆರೋಪಿಯ ವಿರುದ್ಧ ಕಲಂ 504, 324,506 ಭಾ.ದಂ.ಸಂ ಅನ್ವಯ ಶಿಕ್ಷರ್ಹಾ ಅಪರಾಧ ಎಸಗಿರುತ್ತಾರೆ ಎಂಬುದಾಗಿ ದೋಷಾರೋಪಣಾ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಇದರ ವಿಚಾರಣೆ ನಡೆಸಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಬಿ.ಮೋಹನ್ ಬಾಬುರವರು ಕಲಂ 504, 506 ರಲ್ಲಿ ಆರೋಪ ಸಾಬೀತಾಗದೆ ಆ ಆರೋಪದಿಂದ ದೋಷಮುಕ್ತಗೊಳಿಸಿ, ಕಲಂ 324 ರಡಿಯಲ್ಲಿ ಅಪರಾಧ ಎಸಗಿರುವುದು ಸಾಬೀತಾಗಿರುತ್ತದೆ ಎಂದು ಶಿಕ್ಷೆ ವಿಧಿಸಿರುತ್ತಾರೆ.

ಕಲಂ 324 ರ ಅಪರಾಧಕ್ಕೆ ನ್ಯಾಯಾಲಯವು ರೂ.10,000 ಜುಲ್ಮಾನೆ ವಿಧಿಸಿ, ಜುಲ್ಮಾನೆ ಕಟ್ಟದ ಪಕ್ಷದಲ್ಲಿ 6 ತಿಂಗಳ ಸಾಧಾರಣ ಶಿಕ್ಷೆ ಅನುಭವಿಸಬೇಕೆಂದು ಆದೇಶ ಮಾಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ಪ್ರಕರಣ ನಡೆಸಿರುತ್ತಾರೆ.