ಸ್ನೇಹದಲ್ಲಿ ಶಾಲಾ ವಾರ್ಷಿಕೋತ್ಸವ

0

ಸುಳ್ಯದ ಸ್ನೇಹ ಶಾಲೆಯ ವಾರ್ಷಿಕೋತ್ಸವವು ಡಿ.21ರಂದು ಜರಗಿತು.‌

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಆಧ್ಯಕ್ಷ ಡಾ.‌ಚಂದ್ರಶೇಖರ ದಾಮ್ಲೆ ವಹಿಸಿದ್ದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಡಾ. ಚಂದ್ರಶೇಖರ ದಾಮ್ಲೆಯವರು “ನಮ್ಮ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಮಾತೃಭಾಷೆ ಶಿಕ್ಷಣದ ಅಗತ್ಯವಿದೆ. ಕನ್ನಡದಲ್ಲಿ ಕಲಿತಾಗ ಶಿಕ್ಷಣ ಗಟ್ಟಿಯಾಗುತ್ತದೆ. ಕೇವಲ ಪಠ್ಯ ವಿಷಯ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಅನೌಪಚಾರಿಕ ಶಿಕ್ಷಣವನ್ನು ನಮ್ಮ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಾವು ಈಗಾಗಲೇ ನೀಡುತ್ತಿದ್ದೇವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ನೆಕ್ಕಿಲ ಇವರು ಮಾತನಾಡಿ “ಸ್ನೇಹದಲ್ಲಿ ನಡೆಯುವ ಮಾತ-ಪಿತೃ ಪೂಜನ ಕಾರ್ಯಕ್ರಮದಲ್ಲಿ ಪೋಷಕರ ಪಾತ್ರ ಮುಖ್ಯವಾಗಿದೆ ಅಲ್ಲದೆ, ಮಕ್ಕಳ ನಡವಳಿಕೆ ಮತ್ತು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು” ಎಂದರು.

ಇನ್ನೋರ್ವ ಅತಿಥಿ ಹೆಣ್ಣು ಮಕ್ಕಳ ಸುರಕ್ಷಾ ಸಮಿತಿಯ ಅಧ್ಯಕ್ಷೆಯಾಗಿರುವ ಶ್ರೀಮತಿ ನಳಿನಿ ಜಗದೀಶ ಪೆರುಮುಂಡ ಇವರು ಮಾತನಾಡಿ “ಶಾಲಾ ಪರಿಸರದ ವೈಶಿಷ್ಟ್ಯದ ಬಗ್ಗೆ, ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನೀಡುತ್ತಿರುವ ಪಠ್ಯೇತರ ಚಟುವಟಿಕೆ, ಕನ್ನಡದಲ್ಲಿ ಕಲಿಯಿರಿ ಇಂಗ್ಲೀಷನ್ನು ಕಲಿಯಿರಿ ಎಂಬ ಧ್ಯೇಯವಾಕ್ಯದ ಬಗ್ಗೆ ಮೆಚ್ಚುಗೆಯನ್ನು” ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸಿದರು.
ನಂತರ ವಿಶೇಷ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಕಳೆದ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಪೋಷಕರು ಹಿರಿಯ ವಿದ್ಯಾರ್ಥಿಗಳು, ಮಕ್ಕಳು, ಶಿಕ್ಷಕರು ಉಪಸ್ಥಿತರಿದ್ದರು. 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಾಲಾ ಶಿಕ್ಷಕಿ ಶ್ರೀಮತಿ ಅಮೃತ ಕೆ ಇವರು ಸ್ವಾಗತಿಸಿದರು. ಶಾಲಾ ಶಿಕ್ಷಕ ದೇವಿಪ್ರಸಾದ್ ಜಿ ಸಿ ಇವರು ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸವಿತಾ ಎಂ ಇವರು ಕಾರ್ಯಕ್ರಮ ನಿರೂಪಿಸಿದರು.