ಕುಮಾರಧಾರ ಮತ್ಸ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ಪುರುಷರಾಯ ದೈವದಿಂದ ಆಹಾರ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಜಾತ್ರಾ ಮಹೋತ್ಸವದ ನಂತರ ನಡೆಯುವ ಗೋಪುರ ನಡಾವಳಿಯು ಡಿ.24 ರಾತ್ರಿಯಿಂದ ಡಿ.25 ರ ಬೆಳಗ್ಗಿನ ತನಕ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಜರುಗಿತು.
ಬೆಳಗ್ಗೆ ಕ್ಷೇತ್ರ ದೈವ ಪುರುಷರಾಯವು ಕುಮಾರಧಾರ ನದಿಗೆ ತೆರಳಿ ಮತ್ಸ್ಯ ತೀರ್ಥದಲ್ಲಿ ಪವಿತ್ರ ಮೀನುಗಳಿಗೆ ಅಕ್ಕಿ ಹಾಕುವುದರ ಮೂಲಕ ಆಹಾರವನ್ನು ನೀಡಿ ಹರಸಿತು.
ಡಿ.24 ರಾತ್ರಿ ಶ್ರೀ ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ಪುರೋಹಿತ ನಾರಾಯಣ ಭಟ್ ನೂಚಿಲ ಪ್ರಸಾದ ನೀಡಿದರು. ನಂತರ ದೈವಗಳಿಗೆ ಗಗ್ಗರ ಸೇವೆ ಆರಂಭವಾಯಿತು.
ಆರಂಭದಲ್ಲಿ ಗೋಪುರದ ಧರ್ಮಸಮ್ಮೇಳನ ಮಂಟಪದಲ್ಲಿ ಕಾಚುಕುಜುಂಬ, ತೇರಕುಮಾರ ದೈವಗಳ ನೇಮ ನಡಾವಳಿಗಳು ನಡೆಯಿತು.ತದನಂತರ ಕ್ಷೇತ್ರ ರಕ್ಷಕಿ ಹೊಸಳಿಗಮ್ಮ, ಉದ್ರಾಂಡಿ(ಉರಿಮಾರಿ) ಹಾಗೂ ಪೊಟ್ಟಭೂತಗಳಿಗೆ ನೇಮೋತ್ಸವ ನೆರವೇರಿತು. ಮುಂಜಾನೆ ಪಂಜುರ್ಲಿ ಮತ್ತು ದೈವದ ನೇಮೋತ್ಸವ ಜರುಗಿತು.ಪುರುಷರಾಯ ದೈವದ ನೇಮೋತ್ಸವ ನಡೆಯಿತು. ಬಳಿಕ ಬೆಳಗ್ಗೆ ಪುರುಷರಾಯ ದೈವವು ಕುಮಾರಧಾರೆಗೆ ತೆರಳಿತು. ಕುಮಾರಧಾರ ನದಿಯಲ್ಲಿನ ಮತ್ಸ್ಯ ತೀರ್ಥದಲ್ಲಿರುವ ದೇವರ ಮೀನುಗಳಿಗೆ ಪುರುಷರಾಯ ದೈವವು ಆಹಾರ ನೀಡಿತು.ತದನಂತರ ಕುಮಾರಧಾರದಲ್ಲಿ ಭಕ್ತಾಧಿಗಳಿಗೆ ಪ್ರಸಾದ ನೀಡಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಾಲಯ ಸಿಬ್ಬಂದಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.