ಮನೆ ಮನೆಯಿಂದ ಕ್ಷೇತ್ರದಲ್ಲಿ ದೀಪ ದಾನ ವಿಶೇಷ ಕಾರ್ಯಕ್ರಮ
ಶಾಸಕಿ ಕು.ಭಾಗೀರಥಿ ಮುರುಳ್ಯ ಭೇಟಿ – ಇಂಜಿನಿಯರ್ ರವರಿಗೆ ಸನ್ಮಾನ
ಸುಳ್ಯದಕೊಡಿಯಾಲಬೈಲು ಬ್ರಹ್ಮರಗಯ ಕ್ಷೇತ್ರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 46 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಹಾಗೂ ರಂಗ ಪೂಜಾ ಮಹೋತ್ಸವವು ಪೆರಾಜೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ ಜ.1 ರಂದು ಜರುಗಿತು. ಡಿ.26 ರಂದು ಬೆಳಗ್ಗೆ ಧ್ವಜಾರೋಹಣವು ನೆರವೇರಿತು. ಜ.1 ರಂದು ಬೆಳಗ್ಗೆ 18 ತೆಂಗಿನಕಾಯಿಗಳ ಮಹಾಗಣಪತಿ ಹವನವಾಗಿ ಬಳಿಕ ಕೊಪ್ಪರಿಗೆ ಮುಹೂರ್ತ ವಾಗಿ ದೇವರಿಗೆ ಸೀಯಾಳಭಿಷೇಕ, ನವಕ ಕಲಶಾಭಿಷೇಕವಾಯಿತು.
ಮಧ್ಯಾಹ್ನ ಗಣಪತಿ ಕಲಾ ಸಂಘದವರಿಂದ ಭಜನಾ ಕಾರ್ಯಕ್ರಮ ನಂತರ ಮಹಾಪೂಜೆಯಾಗಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು. ಸಂಜೆದೀಪಾರಾಧನೆಯಾಗಿ ವಿಶೇಷವಾಗಿ ಚೆಂಡೆವಾದನ ನಡೆಯಿತು. ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರ, ಶ್ರೀ ದುರ್ಗಾಶಕ್ತಿ ಸೇವಾ ಬಳಗ ಹೊಸಗದ್ದೆ, ಜಯನಗರ ಗಜಾನನ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮವು ನಡೆಯಿತು.
ರಾತ್ರಿ ವಿಶೇಷವಾಗಿ ದೇವರಿಗೆ ರಂಗ ಪೂಜಾ ಮಹೋತ್ಸವವು ನಡೆದು ಆಗಮಿಸಿದ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆಯಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹಿರಿಯ ಗುರುಸ್ವಾಮಿ ಮಾಧವ ಷೇಗೋ ಉಪಸ್ಥಿತರಿದ್ದರು.
ಮನೆ ಮನೆಯಿಂದ ದೀಪದಾನ: ಮನೆಯಿಂದ ಸ್ನಾನ ಮಾಡಿ ಶುಭ್ರ ವಸ್ತ್ರ ಧರಿಸಿ ರಂಗ ಪೂಜೆಯ ಸಮಯದಲ್ಲಿ ತಮ್ಮ ಕುಟುಂಬದೊಂದಿಗೆ ಬಂದು ದೇವಸ್ಥಾನದ ಆವರಣದಲ್ಲಿ ಉರಿಯುವ ದೀಪದಿಂದ ತಾವು ತಂದಿರುವ ದೀಪವನ್ನು ಹಚ್ಚಿ ಬೆಳಗಿಸಿ ಮನಸ್ಸಿನ ಸಂಕಲ್ಪವನ್ನು ಪ್ರಾರ್ಥಿಸಿಕೊಂಡು ಇಷ್ಟಾರ್ಥ ಸಿದ್ಧಿ ಪಡೆಯುವ ದೀಪ ದಾನ ಕಾರ್ಯಕ್ರಮ ವಿಶೇಷವಾಗಿತ್ತು. ಪರಿಸರದಲ್ಲಿ ಇರುವ ಸಾಕಷ್ಟು ಮನೆಯವರು ದೀಪ ದಾನ ದಲ್ಲಿ ಭಾಗವಹಿಸಿದರು. ಇದರಿಂದ ದೇವಸ್ಥಾನದಲ್ಲಿ ದೀಪಗಳ ಬೆಳಕು ನೋಡುಗರ ಕಣ್ಣಿಗೆ ದೀಪಾವಳಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮುರುಳ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಹರೀಶ್ ಕಂಜಿಪಿಲಿ, ಮಹೇಶ್ ಕುಮಾರ್ ಮೇನಾಲ, ಹರೀಶ್ ರೈ ಉಬರಡ್ಕ, ಶಿಲ್ಪಾ ಸುದೇವ್, ಮತ್ತಿತರರು ಜತೆಯಲ್ಲಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆವರಣಕ್ಕೆ ಇಂಟರ್ ಲಾಕ್ ಅಳವಡಿಸಲು ದಾನಿಗಳಾಗಿ ಸಹಕರಿಸಿದ ಶ್ರೀಪಾದ ಇಂಜಿನಿಯರ್ ಶ್ಯಾಮ್ ರವರನ್ನು ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಪೈಚಾರು ರವರು ಸನ್ಮಾನಿಸಿದರು. ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪ ವೃತಧಾರಿಗಳು ಆಗಮಿಸಿದ್ದರು. ಅಯ್ಯಪ್ಪ ವೃತಧಾರಿಗಳಿಗೆ ಫಲಹಾರ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವಿತರಣೆ ಯಾಯಿತು. ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಯಂ ಸೇವಕರಾಗಿ ಸಹಕರಿಸಿದರು.