ಎಐಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳ ಸಹಿತ ನಾಯಕರು ಭಾಗಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿಕೆ
ಕೇಂದ್ರ ಸರಕಾರ, ಕ್ಯಾಂಪ್ಕೋ ನಡೆಯನ್ನು ಖಂಡಿಸಿದ ಎಂ.ವೆಂಕಪ್ಪ ಗೌಡ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದು 9 ತಿಂಗಳು ಪೂರೈಸಿದ್ದು, ಪ್ರಣಾಳಿಕೆಯಲ್ಲಿ ಘೋಷಿಸಿರುವ ಐದು ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿ ನೀಡಿದ ವಚನವನ್ನು ಕಾಂಗ್ರೆಸ್ ಪಾಲಿಸಿದೆ. ಈ ನಿಟ್ಟಿನಲ್ಲಿ ಜ. 21 ರಂದು ಕಾಂಗ್ರೆಸ್‌ನ ಎಲ್ಲಾ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳನ್ನು ಸೇರಿಸುವ ದೊಡ್ಡ ಸಮಾರಂಭವೊಂದು ಜ. 21 ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್ ಹೇಳಿದ್ದಾರೆ.
ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ನಾಯಕರು ಪಾಲ್ಗೊಳ್ಳಲಿದ್ದಾರೆ. ಸುಳ್ಯ ಬ್ಲಾಕ್‌ನಿಂದಲೂ ಕಾಂಗ್ರೆಸ್ ನಾಯಕರು, ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ . ಇದಕ್ಕೆ ಪೂರ್ವಭಾವಿಯಾಗಿ ಜ.15 ರಂದು ಸುಳ್ಯದಲ್ಲೂ ಸಭೆ ನಡೆಯಲಿದೆ ಎಂದರು.
ಸುಳ್ಯದಲ್ಲಿ ಬಹಳಷ್ಟು ಸಮಸ್ಯೆಗಳಿದ್ದರೂ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಬಂದಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಿನ್ನೆ ಮಂಗಳೂರಿನಲ್ಲಿಯೂ ಅವರ ಜೊತೆ ಮಾತನಾಡಿದ್ದೇವೆ. ಜ. 21 ರ ಕಾರ್ಯಕ್ರಮದ ಬಳಿಕ ಬರುವುದಾಗಿ ತಿಳಿಸಿದ್ದಾರೆ ಎಂದರು.
ಅಡಿಕೆ ಆಮದು : ಸಂಸದರು ಮಾತನಾಡಲಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡರು, ವಿದೇಶದಿಂದ ಇನ್ನೂ ಕೂಡಾ ಅಡಿಕೆ ಆಮದಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿ ಅಡಿಕೆ ಧಾರಣೆ ಕುಸಿಯುತ್ತಿದೆ. ಕೇಂದ್ರ ಸರಕಾರ ಇದಕ್ಕೆ ಕಡಿವಾಣ ಹಾಕಬೇಕು. ನಮ್ಮ ಸಂಸದರು ಈ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
ರೈತರ ರಕ್ಷಣೆಗಾಗಿ ಆರಂಭಗೊಂಡಿರುವ ಕ್ಯಾಂಪ್ಕೋ ಸಂಸ್ಥೆ ಈಗ ವ್ಯಾಪಾರದ ಮಾರ್ಗ ಹಿಡಿದಿದೆ. ಅಡಿಕೆ ಧಾರಣೆ ಸ್ಥಿತ್ಯಂತರಕ್ಕೆ ಕ್ಯಾಂಪ್ಕೋ ಕಾರಣವಾಗುತ್ತಿದೆ. ಇನ್ನಾದರೂ ಕ್ಯಾಂಪ್ಕೋ ವ್ಯಾಪಾರಿ ಮನೋಧರ್ಮ ಬಿಟ್ಟು ಕೃಷಿಕರ ಪರ ಸೇವಾ ಮನೋಭಾವನೆ ತೋರಲಿ ಎಂದು ವೆಂಕಪ್ಪ ಗೌಡರು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್. ಜಯಪ್ರಕಾಶ್ ರೈ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗಂಗಾಧರ್, ನಾಯಕರಾದ ಕೆ.ಗೋಕುಲ್ ದಾಸ್, ಸತ್ಯ ಕುಮಾರ್ ಆಡಿಂಜ, ನಂದರಾಜ್ ಸಂಕೇಶ, ಭವಾನಿ ಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ ಸುದ್ದಿ ಗೋಷ್ಠಿಯಲ್ಲಿದ್ದರು.