ಚೆಂಬು: ಶಾಸಕ ಪೊನ್ನಣ್ಣರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

0

ಶಾಸಕರಿಂದ ಗ್ರಾಮಸ್ಥರ ಅಹವಾಲು ಸ್ವೀಕಾರ

ವಿರಾಜಪೇಟೆ ಶಾಸಕ
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಜ.21ರಂದು ಚೆಂಬು ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಚೆಂಬು ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಶಾಸಕರು ಬಳಿಕ ಆನ್ಯಾಳ – ಕಲ್ಲುಗುಂಡಿ – ದಬ್ಬಡ್ಕ ರಸ್ತೆಗೆ ಆನ್ಯಾಳದಲ್ಲಿ ಲೋಕೋಪಯೋಗಿ ಇಲಾಖೆಯ 75 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಹಾಗೂ ಸೇತುವೆಗೆ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ದಬ್ಬಡ್ಕದಲ್ಲಿ ಮಳೆ ಹಾನಿಗೊಳಗಾದ ಸೇತುವೆ ವೀಕ್ಷಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಳಿಕ ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ, ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಅರಣ್ಯ ಇಲಾಖೆಯ ಸಮಸ್ಯೆಗಳ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರಕ್ಕೆ ಸೂಚಿಸಿದರು. ಗ್ರಾಮದಲ್ಲಿ ಆನೆ ಹಾವಳಿ , ಭೂಒತ್ತುವರಿ ಸಮಸ್ಯೆ, ಹಕ್ಕುಪತ್ರಗಳ ಬಗ್ಗೆ ಗ್ರಾಮಸ್ಥರು ಶಾಸಕರ ಗಮನ ಸೆಳೆಯುವ ಪ್ರಶ್ನೆ ಕೇಳಿದರು.
ಚೆಂಬು ಗ್ರಾಮದ ಕಟ್ಟಪಳ್ಳಿ ವಾಲ್ಮಿಕಿ ಆಶ್ರಮ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಯನ್ನು ಇದೇ ಸಂದರ್ಭದಲ್ಲಿ ಶಾಸಕರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

ಏಣಿಯಾರು – ಉಂಬಳೆ ರಸ್ತೆಯ ಬಾಣೂರು ತಿರುವಿನಲ್ಲಿ ಮುಖ್ಯಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ಅಂದಾಜು 4 ಲಕ್ಷ ಅನುದಾನದಲ್ಲಿ ರಸ್ತೆ ಡಾಮರೀಕರಣಕ್ಕೆ ಗುದ್ದಲಿ ಪೂಜೆ ನಡೆಸಿದರು. ಬಳಿಕ ಚಾಂಬಾಡು ಕಿನುಮಣಿ – ಉಳ್ಳಾಕುಲು ಚಾವಡಿಯ ಸಮೀಪದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ನಿರ್ಮಾಣಗೊಂಡ ಕಾಲುಸಂಕವನ್ನು ಉದ್ಘಾಟಿಸಿದರು. ಕಟ್ಟಪಳ್ಳಿ ಜನತಾ ಕಾಲನಿ ರಸ್ತೆಗೆ ಸೇತುವೆ ಹಾಗೂ ಅತ್ಯಾಡಿ ಕುಟುಂಬಸ್ಥರ ರಸ್ತೆಗೆ ಸೇತುವೆ ನಿರ್ಮಾಣದ ಜಾಗವನ್ನು ಇದೇ ಸಂದರ್ಭದಲ್ಲಿ ಶಾಸಕರು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆ.ಪಿ.ಸಿ.ಸಿ. ವಕ್ತಾರ ರಮೇಶ್ ಟಿ.ಪಿ., ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಸೂರಜ್ ಹೊಸೂರು, ವಲಯ ಅಧ್ಯಕ್ಷ ರವಿರಾಜ್ ಹೊಸೂರು ಸೇರಿದಂತೆ ಗ್ರಾ.ಪಂ. ಸದಸ್ಯರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.