ಶಕ್ತಿಪುಂಜದ ಮೂಲಕ ಪೆರುಂಬಾರು ಕ್ಷೇತ್ರದಲ್ಲಿ ದುರ್ಗಾದೇವಿ ನೆಲೆಸಿದ್ದಾಳೆ: ಧರ್ಮಪಾಲನಾಥ ಸ್ವಾಮೀಜಿ
ಮನುಷ್ಯನ ದುರ್ನಡತೆಗಳನ್ನು ಹೋಗಲಾಡಿಸುವ ಶಕ್ತಿ ದುರ್ಗೆಯಲ್ಲಿದೆ. ಪ್ರಾಚೀನ ಇತಿಹಾಸವುಳ್ಳ ಭೂಮಂಡಲದ ಸೃಷ್ಟಿಯಲ್ಲಿ ಅದೆಷ್ಟೋ ಅಗೋಚರ ಶಕ್ತಿಗಳಿರುತ್ತದೆ. ಯಾವ ಯಾವ ಸ್ಥಳ ಸಾನಿಧ್ಯದಲ್ಲಿ ಯಾವ ಯಾವ ಚೈತನ್ಯವ ಶಕ್ತಿಗಳು ಇವೆಯೋ ಯಾರಿಗೂ ತಿಳಿಯುವುದಿಲ್ಲ. ಇವೆಲ್ಲವೂ ಭಾರತೀಯ ಸಂಸ್ಕೃತಿಯಲ್ಲಿ ನಮಗೆ ಕಾಣಸಿಗುತ್ತವೆ. ಮೂರು ಶಕ್ತಿಪುಂಜಗಳಾದ ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಗಳ ಶಕ್ತಿಪುಂಜದ ಮೂಲಕ ಇಲ್ಲಿ ದುರ್ಗಾದೇವಿಯ ಸನ್ನಿಧಿ ಬೆಳಕಿಗೆ ಬಂದಿದ್ದು, ಇಲ್ಲಿ ನೆಲೆಸಿದ್ದಾಳೆ. ಮನುಷ್ಯನಿಗೆ ದೈವ – ದೇವರ ಮೇಲಿನ ನಂಬಿಕೆ ಮತ್ತು ವಿಶ್ವಾಸ ಬಹಳ ಮುಖ್ಯ. ಅವರವರ ಧಾರ್ಮಿಕ ನಂಬಿಕೆ ಮತ್ತು ವಿಶ್ವಾಸಗಳೇ ಅವರವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ ಎಂದು ಮಂಗಳೂರಿನ ಆದಿಚುಂಚನಗಿರಿ ಶಾಖಾಮಠದ ಪರಮಪೂಜ್ಯ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಅವರು ಕನಕಮಜಲಿನ ಪೆರುಂಬಾರು ಶ್ರೀ ಮದಿಮಾಳುಮುಖ ಶ್ರೀ ದುರ್ಗಾದೇವಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಆಶೀರ್ವಚನ ನೀಡಿ, ಮಾತನಾಡಿದರು.
ಕನಕಮಜಲು ಗ್ರಾಮದ ಪೆರುಂಬಾರು ಮದಿಮಾಳುಮುಖ ಶ್ರೀ ದುರ್ಗಾದೇವಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಬ್ರಹ್ಮಶ್ರೀ ವೇ.ಮೂ. ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳುಕ್ಕುರಾಯರ ನೇತೃತ್ವದಲ್ಲಿ ಫೆ.13 ಮತ್ತು 14ರಂದು ಜರುಗಿತು.
ಫೆ.13ರಂದು ಬೆಳಿಗ್ಗೆ ಹಸಿರುವಾಣಿಯನ್ನು ಆರತಿಯೊಂದಿಗೆ ಶ್ರೀ ದುರ್ಗಾದೇವಿ ಅಮ್ಮನವರಿಗೆ ಸಮರ್ಪಿಸಲಾಯಿತು. ಸಂಜೆ ಪ್ರಾಸಾದ ಪರಿಗ್ರಹ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಧಿವಾಸ ರಕ್ಷೆ ಜರುಗಿತು.
ಫೆ.14ರಂದು ಪೂರ್ವಾಹ್ನ ಗಣಪತಿ ಹೋಮ, ಕಲಶಪೂಜೆ, ಶ್ರೀ ದುರ್ಗಾದೇವಿ ಅಮ್ಮನವರ ಪ್ರತಿಷ್ಠೆ, ಕಲಶಾಭಿಷೇಕ, ಪೂಜೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನಕಮಜಲು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಅವರು ಅಧ್ಯಕ್ಷತೆ ವಹಿಸಿ, ಶುಭಹಾರೈಸಿದರು.
ಗೌರವ ಉಪಸ್ಥಿತರಾಗಿ ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಜಾಲ್ಸೂರಿನ ನಂಗಾರು ಶ್ರೀ ಮಹಾವಿಷ್ಣುಮೂರ್ತಿ ಮತ್ತು ಧರ್ಮದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಗೌಡ ನಂಗಾರು, ಕನಕಮಜಲಿನ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಮಹಾವಿಷ್ಣು ಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೀತಾರಾಮ ಮಾಸ್ತರ್ ಬುಡ್ಲೆಗುತ್ತು, ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗೋಪಣ್ಣ ಗೌಡ ಪೆರುಂಬಾರು, ಕಾರ್ಯದರ್ಶಿ ವಾಸುದೇವ ಗೌಡ ಪೆರುಂಬಾರು, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೇಪು ಸುಂದರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಕಣಜಾಲು, ಖಜಾಂಜಿ ದಾಮೋದರ ಗೌಡ ಕೋಡ್ತಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಕೇಪು ಸುಂದರ ಮಾಸ್ತರ್ ಅವರನ್ನು ಸ್ವಾಮೀಜಿಗಳು ಗೌರವಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವಾಸುದೇವ ಗೌಡ ಪೆರುಂಬಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮದಿಮಾಳುಮುಖ ಶ್ರೀ ದುರ್ಗಾದೇವಿ ಅಮ್ಮನವರ ಸ್ಥಳಸಾನಿಧ್ಯದ ಕುರಿತು ವಿವರಿಸಿದರು.
ಮಧ್ಯಾಹ್ನ ಶ್ರೀ ದುರ್ಗಾದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಸಂಜೆ ಕನಕಮಜಲಿನ ಶ್ರೀ ಕನಕದಾಸ ಮಕ್ಕಳ ಭಜನಾ ತಂಡ ಹಾಗೂ ಕನಕಮಜಲಿನ ಶ್ರೀ ಸ್ವರ್ಣಾಂಜಲಿ ಭಜನಾ ತಂಡದಿಂದ ಭಜನಾ ಸೇವೆ ನಡೆಯಲಿದ್ದು, ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ನಡೆಯಲಿದೆ.