ಅಜ್ಜಾವರ : ಪಂಚಾಯತ್‌ಗೆ ಆಡಳಿತದ ನಿರ್ಣಯದಂತೆ ನೀರಿನ ಬಿಲ್ ಪಾವತಿಸದ ಬಳಕೆದಾರರಿಗೆ ನೀರು ಸರಬರಾಜು ನಿಲ್ಲಿಸಿದ ಗ್ರಾ.ಪಂ.

0

ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ನೀರು ಬಳಕೆದಾರರು ಗ್ರಾ.ಪಂ.ಗೆ ನೀರಿನ ಬಿಲ್ ಪಾವತಿಸದೇ ಇರುವುದರಿಂದ ಬಿಲ್ ಪಾವತಿಸುವವರೆಗೆ ಸಂಪರ್ಕ ಕಡಿತಗೊಳಿಸುವಂತೆ ಪಂಚಾಯತ್ ಆಡಳಿತ ಮಂಡಳಿಯ ನಿರ್ಣಯದಂತೆ ಬಯಂಬು ಕಾಲೊನಿಗೆಯ ನೀರಿನ ಸಂಪರ್ಕ ಕಡಿತಗೊಳಿಸಿದ್ದು, ಈ ಕುರಿತು ಮಾಜಿ ತಾ.ಪಂ. ಅಧ್ಯಕ್ಷರು ತಾ.ಪಂ. ಇ.ಒರಿಗೆ ದೂರು ನೀಡಿರುವುದಾಗಿ ವರದಿಯಾಗಿದೆ.


ಅಜ್ಜಾವರ ಗ್ರಾ.ಪಂ. ವ್ಯಾಪ್ತಿಯಲ್ಲಿ ಪಂಚಾಯತ್ ನೀರು ಬಳಕೆದಾರರಲ್ಲಿ ಹಲವರು ಗ್ರಾ.ಪಂ. ಗೆ ಬಿಲ್ ಪಾವತಿಸಿರಲಿಲ್ಲ. ಈ ಕುರಿತು ಮೂರು ತಿಂಗಳ ಹಿಂದೆ ಗ್ರಾ.ಪಂ. ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು, ಪಂಚಾಯತ್ ನೀರು ಪಡೆದು ಬಿಲ್ ಪಾವತಿಸದವರಿಗೆ ನೋಟೀಸ್ ನೀಡಬೇಕು ಹಾಗೂ ವ್ಯಾಪ್ತಿಯಲ್ಲಿ ಮೈಕ್ ಅನೌನ್ಸ್ ಮಾಡಿ ಬಿಲ್ ಪಾವತಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಸಂಪರ್ಕ ಕಡಿತ ಮಾಡುವುದೆಂದು ನಿರ್ಣಯ ಮಾಡಿದ್ದರೆನ್ನಲಾಗಿದೆ. ಅದರಂತೆ ನೀರು ಪಡೆದು ಬಿಲ್ ಪಾವತಿಸದವರಿಗೆ ಪಂಚಾಯತ್‌ನಿಂದ ಬಿಲ್ ಪಾವತಿಸಲು ಸೂಚನೆ ನೀಡಲಾಗಿತ್ತಲ್ಲದೆ, ಮೈಕ್ ಅನೌನ್ಸ್ ಮಾಡಲಾಗಿತ್ತು.


ಅಜ್ಜಾವರದ ಬಯಂಬು ಕಾಲೊನಿ ನಿವಾಸಿಗಳು ನೀರಿನ ಬಿಲ್ ಪಾವತಿಸಲು ಬಾಕಿ ಇದ್ದುದರಿಂದ ಫೆ.17ರಂದು ಆಡಳಿತದ ನಿರ್ಣಯದಂತೆ ಪಂಚಾಯತ್ ಸಿಬ್ಬಂದಿ ನೀರಿನ ಶೆಡ್‌ಗೆ ಬೀಗ ಹಾಕಿ ಬಂದಿದ್ದರೆನ್ನಲಾಗಿದೆ. ಇದರಿಂದ ಕಾಲೊನಿಯಲ್ಲಿ ನೀರಿನ ಅಭಾವ ಎದುರಾಗಿದೆ. ಈ ಕುರಿತು ನಿವಾಸಿಗಳು ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕರಿಗೆ ದೂರಿಕೊಂಡಿದ್ದು, ಅವರು ತಾ.ಪಂ. ಇ.ಒ. ರಿಗೆ ಫೋನ್ ಮಾಡಿ ನೀರಿನ ಸಮಸ್ಯೆ ಇತ್ಯರ್ಥ ಪಡಿಸಲು ಹೇಳಿದ್ದಾರೆಂದು ತಿಳಿದು ಬಂದಿದೆ.


ಈ ಕುರಿತು ಸುದ್ದಿಗೆ ಮಾಹಿತಿ ನೀಡಿದ ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕರು, ಬಯಂಬು ಕಾಲೊನಿಯ ನೀರಿನ ಶೆಡ್‌ಗೆ ಪಂಚಾಯತ್ ಬೀಗ ಹಾಕಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ. ಬಿಲ್ ಪಾವತಿಸಲು ಬಾಕಿ ಇರುವುದು ನಿಜ. ಅದನ್ನು ಸೋಮವಾರ ಪಾವತಿಸುವುದಾಗಿ ನಿವಾಸಿಗಳು ಹೇಳುತ್ತಿದ್ದಾರೆ. ಆದ್ದರಿಂದ ಅವರಿಗೆ ತಕ್ಷಣಕ್ಕೆ ನೀರಿನ ವ್ಯವಸ್ಥೆ ಆಗಬೇಕು. ಈ ಕುರಿತು ಇ.ಒ.ರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.


ಗ್ರಾ.ಪಂ. ಉಪಾಧ್ಯಕ್ಷ ಜಯರಾಮ ಅತ್ಯಡ್ಕರನ್ನು ಸಂಪರ್ಕಿಸಿ ವಿಚಾರಿಸಿದಾಗ, ಪಂಚಾಯತ್‌ಗೆ ನೀರಿನ ಬಿಲ್ ತುಂಬಾ ಬರಲು ಇದೆ. ಈ ಕುರಿತು ಮೂರು ತಿಂಗಳ ಹಿಂದೆಯೇ ಸಭೆಯಲ್ಲಿ ಚರ್ಚೆ ನಡೆದಿದೆ. ಬಿಲ್ ಬಾಕಿ ಇರುವವರಿಗೆ ಸೂಚನೆಯೂ ನೀಡಲಾಗಿದೆ. ತಾವು ಪಂಚಾಯತ್‌ನಿಂದ ಪಡೆದ ನೀರಿಗೆ ಬಿಲ್ ಎಲ್ಲರೂ ಪಾವತಿಸಬೇಕು. ಬಿಲ್ ಬಾಕಿ ಇಟ್ಟರೆ ಹೇಗೆ? ಕೆಲವರದ್ದು 1200ಕ್ಕಿಂತ ಮೇಲ್ಪಟ್ಟು 6,000 ದವರೆಗೂ ಬಿಲ್ ಬಾಕಿ ಇದೆ. ಹೀಗೆ ಯಾರೂ ಮಾಡಬಾರದು. ಎಲ್ಲರೂ ಬಿಲ್ ಪಾವತಿಸಬೇಕು. ಅವರು ಬಿಲ್ ಪಾವತಿಸಿದ ಕೂಡಲೇ ನೀರಿನ ಮರು ಸಂಪರ್ಕ ಮಾಡುತ್ತೇವೆ ಎಂದು ಹೇಳಿದರು.


ನೀರಿನ ಬಿಲ್ ಬಾಕಿದಾರರಿಗೆ ನೋಟೀಸ್ ಮಾಡಿವೆ. ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿ ಮೈಕ್ ಅನೌನ್ಸ್ ಕೂಡ ಮಾಡಿವೆ. ಅವರಿಗೆ ಕುಡಿಯವ ನೀರಿನ ಸಮಸ್ಯೆ ಬಾರದಂತೆ ಕಾಲನಿಯಲ್ಲಿ ಸರಕಾರಿ ಬಾವಿ ಇದೆ. ಬಾಕಿ ಹಣ ಪಾವತಿಸಿದ ಕೂಡಲೇ ನಳ್ಳಿ ನೀರಿನ ಸಂಪರ್ಕ ನೀಡುತ್ತೇವೆ ಎಂದು ಪಂಚಾಯತ್ ಪಿಡಿಒ ತಿಳಿಸಿದ್ದಾರೆ.