ಪ್ರಸಿದ್ಧ ಚಿನ್ನಾಭರಣ ಮಳಿಗೆಗಳಲ್ಲೊಂದಾದ ಜಿ ಎಲ್ ಆಚಾರ್ಯ ಜ್ಯುವೆಲರ್ಸ್ ನವರು ಬೇರೆ ಬೇರೆ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ವರ್ಷ ಮಹಿಳಾ ದಿನಾಚರಣೆ ಪ್ರಯುಕ್ತ ತಾಲೂಕಿನ ಸಾಧಕ ಮಹಿಳೆಯರನ್ನು ಗುರುತಿಸಿ “ಜಿ ಎಲ್ ವುಮನ್ ಆಫ್ ಗೋಲ್ಡ್” ಎಂದು ತಮ್ಮೆಲ್ಲಾ ಶಾಖೆಗಳಿಂದ ಈರ್ವರನ್ನು ಆಯ್ಕೆ ಮಾಡಿದ್ದು ಸುಳ್ಯ ಶಾಖೆಯಿಂದ ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿ ಹಾಗೂ ಸಂಪಾಜೆಯ ಗೃಹಿಣಿ, ಸಾಹಿತಿ ಸಹನಾ ಕಾಂತಬೈಲು 2024 ರ ಮಹಿಳಾ ದಿನಾಚರಣೆಯ “ಜಿ ಎಲ್ ವುಮನ್ ಆಫ್ ಗೋಲ್ಡ್” ಆಗಿ ಆಯ್ಕೆಯಾಗಿದ್ದಾರೆ.
ಡಾ ಅನುರಾಧಾ ಕುರುಂಜಿಯವರು ಉಪನ್ಯಾಸಕರಾಗಿದ್ದು, ಶೈಕ್ಷಣಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರೊಂದಿಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ರಾಜ್ಯಾದ್ಯಂತ ಹಾಗೂ ಅಂತಾರಾಜ್ಯವಾದ ಕೇರಳ – ಕಾಸರಗೋಡುಗಳಲ್ಲಿ ಸುಮಾರು 2100 ಕ್ಕೂ ಅಧಿಕ ತರಬೇತಿಗಳನ್ನು ನೀಡುವ ಮೂಲಕ ಜನಮಾನಸದಲ್ಲಿ ಅಚ್ಚಳಿಯದೇ ಉಳಿದವರು. ಎನ್ ಎಸ್ ಎಸ್, ರೆಡ್ ಕ್ರಾಸ್, ಜೇಸಿ ಸಂಸ್ಥೆಗಳ ಮೂಲಕ ನೂತನ ದಾಖಲೆ ನಿರ್ಮಿಸಿದವರು. ಕವಿಯಾಗಿ, ಸಾಹಿತಿಯಾಗಿ, ಸಂಘಟಕಿಯಾಗಿ, ಕಾರ್ಯಕ್ರಮ ನಿರೂಪಕಿಯಾಗಿ ಗುರುತಿಸಿಕೊಂಡವರು. ಹತ್ತು ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
ಸಹನಾ ಕಾಂತಬೈಲು ಅವರು ಗೃಹಿಣಿಯಾಗಿದ್ದು ಕೃಷಿ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರೊಂದಿಗೆ ಸಾಹಿತಿಯಾಗಿ ಗುರುತಿಸಿಕೊಂಡವರು. ಜೇನು ಕೃಷಿ, ಹೈನುಗಾರಿಕೆ ಮೊದಲಾದ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತಿಯಾಗಿ ರಾಜ್ಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡವರು. ಹತ್ತು ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.
ಇದೀಗ “ಜಿ ಎಲ್ ವುಮನ್ ಆಫ್ ಗೋಲ್ಡ್” ಆಗಿ ಜಿ ಎಲ್ ಆಚಾರ್ಯದವರು ಗುರುತಿಸಿದ್ದಾರೆ. ಜಿ ಎಲ್ ಆಚಾರ್ಯದವರ ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂ ಖಾತೆಗಳಲ್ಲಿ ಇವರ ಸಾಧನೆಯ ತುಣುಕುಗಳು ಹರಿದಾಡುತ್ತಿವೆ.