ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದೆ

0

ಸಂವಿಧಾನ ರಕ್ಷಣೆಗೆ ನಾವೆಲ್ಲರೂ ಒಂದಾಗಿದ್ದೇವೆ


ಪತ್ರಿಕಾಗೋಷ್ಠಿಯಲ್ಲಿ ಇಂಡಿಯಾ ಮೈತ್ರಿ ಪಕ್ಷಗಳ ಮುಖಂಡರ ಹೇಳಿಕೆ

ಕೇಂದ್ರದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದು, ಸಂವಿಧಾನವನ್ನು ಕೂಡ ನಾಶ ಮಾಡುತ್ತಿದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ಪಕ್ಷದ ವಿರುದ್ಧ ಈ ಚುನಾವಣೆಯಲ್ಲಿ ನಾವು ಒಂದಾಗಿ ಇಂಡಿಯಾ ಮೈತ್ರಿ ಕೂಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಇಂಡಿಯಾ ಮೈತ್ರಿ ಕೂಟದ ಪಕ್ಷದ ಮುಖಂಡರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ನಿರ್ಣಯ ಕೈಗೊಂಡಿರುವ ನಮ್ಮ ರಾಷ್ಟ್ರೀಯ ನಾಯಕರುಗಳು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ನಿಂತು ಬಿಜೆಪಿಗೆ ತಕ್ಕ ಪಾಠವನ್ನು ಕಲಿಸಲು ನಿರ್ಧರಿಸಿದ್ದಾರೆ.
ಅದರಂತೆ ಸುಳ್ಯ ಬ್ಲಾಕ್ ಮಟ್ಟದಲ್ಲಿ ಸಮಾನಮಸ್ಕಾರ ಪಕ್ಷದ ನಾಯಕರುಗಳ ಸಭೆಯನ್ನು ಕರೆದು ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್ ರವರ ಗೆಲುವಿಗಾಗಿ ಚುನಾವಣಾ ಕಾರ್ಯದಲ್ಲಿ ತೊಡಗಿಕೊಳ್ಳಲು ನಾವೆಲ್ಲರೂ ನಿರ್ಧರಿಸಿಕೊಂಡಿದ್ದೇವೆ ಎಂದು ಹೇಳಿದರು.ಅದಕ್ಕೆ ಪೂರಕವಾಗಿ ಸುಳ್ಯ ಆಮ್ ಆದ್ಮಿ ಪಕ್ಷದ ಮುಖಂಡರು, ಸಿಪಿಐಎಂ ಪಕ್ಷದ ಮುಖಂಡರು,ರೈತ ಮುಖಂಡರುಗಳು ನಮಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ ಎಡಮಲೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ರವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಅಲ್ಲದೆ ದೆಹಲಿ ಸರ್ಕಾರದ ವಿವಿಧ ಸಚಿವರುಗಳನ್ನು ಬಂಧಿಸುವ ಮೂಲಕ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಪ್ರತಿಯೊಂದು ಸೆಕ್ಟರ್?ಗಳನ್ನು ನಾಶ ಮಾಡ್ತಿದ್ದಾರೆ. ವಿಮಾನಯಾನ, ರೈಲ್ವೆ ವ್ಯವಸ್ಥೆಯನ್ನೂ ಕೂಡ ಹಾಳು ಮಾಡಿದ್ದಾರೆ. ಪ್ರಧಾನಿ ಮೋದಿ ಇಡೀ ದೇಶದ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು. ಚುನಾವಣಾ ಬಾಂಡ್ ಎಂಬ ಬೃಹತ್ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ಇವರು ಕಳಪೆ ಔಷದ ತಯಾರಿಸುವ ಕಂಪನಿಗಳ ಜೊತೆ ಸೇರಿ ಅವರ ಪಕ್ಷಕ್ಕೆ ಚಂದಾಹಣ ಸಂಗ್ರಹಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಔಷಧ ತಯಾರಿಸುವ ಒಟ್ಟು ೩೫ ಕಂಪನಿಗಳ ಸುಮಾರು ಸಾವಿರ ಕೋಟಿ ರೂಪಾಯಿಗಳ ಬಾಂಡ್ ಖರೀದಿಸಿ ಏಳು ಕಂಪನಿಗಳ ಕಳಪೆ ಔಷದಗಳ ಕುರಿತು ತನಿಖೆ ನಡೆಯುತ್ತಿರುವಾಗಲೇ ಅವುಗಳಿಂದ ಬಾಂಡು ಖರೀದಿಸಿ ಜನರ ಜೀವನದಲ್ಲಿ ಚೆಲ್ಲಾಟವಾಡಿದ್ದಾರೆ ಎಂದು ಅವರು ಹೇಳಿದರು. ಈ ಎಲ್ಲಾ ಕಾರಣಗಳಿಂದ ನಾವು ಬಿಜೆಪಿ ಪಕ್ಷವನ್ನು ವಿರೋಧಿಸುತ್ತಿದ್ದು ನಮ್ಮ ಹಿರಿಯರ ನಿರ್ದೇಶನದಂತೆ ಈ ಬಾರಿ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಸಿ ಪಿ ಐ ಎಂ ಮುಖಂಡ ರಾಬರ್ಟ್ ಡಿಸೋಜ ಮಾತನಾಡಿ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಇಂದಿನವರೆಗೆ ಪ್ರತಿಯೊಂದು ವಸ್ತುಗಳ ಮೇಲೆ ಬೆಲೆ ಏರಿಕೆ ಗಗನಕ್ಕೆ ಮುಟ್ಟುತ್ತಿದೆ. ಎಷ್ಟೋ ಕೋಟಿ ಉದ್ಯೋಗವನ್ನು ಸೃಷ್ಟಿ ಮಾಡಿಸುತ್ತೇವೆ ಎಂದು ಹೇಳಿ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ರೈತರ ಸಮಸ್ಯೆ ಆಗಿರಬಹುದು, ಕಪ್ಪು ಹಣ ತರುತ್ತೇವೆ ಎಂದು ಹೇಳಿದ ಮಾತುಗಳು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಕೆಲಸ ಕಾರ್ಯಗಳು, ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರೂಪಾಯಿ ನೀಡುವ ಸುಳ್ಳು ಭರವಸೆ ಇವೆಲ್ಲವೂ ಜನರಿಗೆ ತಿಳಿದಿರುವಂತದ್ದಾಗಿದೆ.


ತನಿಕಾ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವುದು ಇವೆಲ್ಲವನ್ನೂ ಖಂಡಿಸಿ ನಮ್ಮ ಹಿರಿಯರು ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲವನ್ನು ನೀಡಿದ್ದಾರೆ. ಅದನ್ನು ನಾವು ಇಲ್ಲಿಯೂ ಕೂಡ ಪಾಲಿಸುತ್ತೇವೆ ಎಂದು ಹೇಳಿದರು. ಸ್ವಾತಂತ್ರ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ.ಪ್ರಧಾನಿ ಮೋದಿ ದೇಶದ ಜನರನ್ನು ಆತಂಕಕ್ಕೆ ದೂಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಭರತ್ ಮುಂಡೋಡಿ ಮಾತನಾಡಿ, ಬಿಜೆಪಿಯ ವಿಚಾರಧಾರೆಯ ವಿರುದ್ದ ಹೋರಾಟ ಮುಂದುವರಿಯಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಎಲ್ಲಾ ತಪ್ಪುಗಳನ್ನು ಮಾಡಿ ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅದು ಸಾಧ್ಯವಿಲ್ಲ. ಇಂಡಿಯಾ ಮೈತ್ರಿಕೂಟವು ಒಂದಾಗಿ ಈ ಬಾರಿ ಅಧಿಕಾರವನ್ನು ಹಿಡಿಯಲಿದೆ ಎಂದು ಹೇಳಿದರು. ಹೃದ್ರೋಗ,ಬಿಪಿ ಮತ್ತು ಇತರ ಕಾಯಿಲೆಗಳು ಹೆಚ್ಚಾಗುತ್ತಿದ್ದು ಯುವ ಸಮುದಾಯದ ವ್ಯಕ್ತಿಗಳು ಇದಕ್ಕೆ ಬಲಿಯಾಗುತ್ತಿದ್ದು ಇದಕ್ಕೆ ಮೂಲ ಕಾರಣವೇ ಇವರ ಬಾಂಡ್ ಖರೀದಿ ಎಂದು ಹೇಳಿದರು. ಕಳಪೆ ಔಷಧಿಗಳನ್ನು ತಯಾರಿಸುವ ಕಂಪನಿ ಗಳಿಂದ ಬಾಂಡ್ ಪಡೆಯುವ ಮೂಲಕ ಮಾರುಕಟ್ಟೆಗೆ ಔಷಧಿಗಳನ್ನು ತಂದು ಜನರ ಪ್ರಾಣದ ಜೊತೆ ಆಟವಾಡುತ್ತಿದ್ದಾರೆ ಎಂದು ಹೇಳಿದರು. ಈ ಚುಚ್ಚುಮದ್ದುಗಳ ತೀವ್ರ ಅಡ್ಡ ಪರಿಣಾಮದಿಂದ ರೋಗಿಗಳು ಇಂದು ಸಂಕಷ್ಟಕ್ಕೀಡಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಂ ವೆಂಕಪ್ಪ ಗೌಡ, ಮುಸ್ತಫ ಜನತಾ, ಪಿ ಎಸ್ ಗಂಗಾಧರ್, ಆಮ್ ಆದ್ಮಿ ಪಕ್ಷದ ಮುಖಂಡರುಗಳಾದ ರಶೀದ್ ಜಟ್ಟಿಪಳ್ಳ, ಕಲಂದರ್ ಎಲಿಮಲೆ, ಶಾಫಿ ಅಡ್ಕ ಉಪಸ್ಥಿತರಿದ್ದರು.