ದೇವರ ನೃತ್ಯಬಲಿ – ಬಟ್ಟಲುಕಾಣಿಕೆ – ಭಜನೆ – ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ
ಕೊಡಗು ಸಂಪಾಜೆ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಶ್ರೀ ದೇವರ ಕಾಲಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಎ.11 ಮತ್ತು 12ರಂದು ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಜರುಗಿ ಸಂಪನ್ನಗೊಂಡಿತು.
ಎ.11ರಂದು ಬೆಳಿಗ್ಗೆ ಉಗ್ರಾಣ ತುಂಬಿಸುವುದರ ಮೂಲಕ ಜಾತ್ರೋತ್ಸವವು ಪ್ರಾರಂಭಗೊಂಡಿತು.
ಬಳಿಕ ಪರಿವಾರ ದೈವಗಳ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ತಂತ್ರಿಗಳ ಆಗಮನ, ದೇವತಾ ಪ್ರಾರ್ಥನೆ, ಪಶುದಾನ, ಪುಣ್ಯಾಹ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಅಪ್ಪು ಮೆಲೋಡಿಸ್ ಕುದ್ರೆಪಾಯ ತಂಡದಿಂದ ಸಂಗೀತ ರಸಮಂಜರಿ, ಅಪರಾಹ್ನ ಶ್ರೀ ಪಂಚಾನನ ಭಜನಾ ತಂಡದ ಮಕ್ಕಳಿಂದ ಕುಣಿತ ಭಜನೆ, ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ರಾತ್ರಿ ಕಲ್ಲುಗುಂಡಿಯ ನಟರಾಜ ನೃತ್ಯ ನಿಕೇತನದವರಿಂದ ಭರತ ನಾಟ್ಯ ವೈಭವ, ರಾತ್ರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ-ಸಹಾಯ ಸಂಘದ ಸದಸ್ಯರು ಹಾಗೂ ಕೊಯನಾಡಿನ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ ಜರುಗಿತು.
ಎ.12ರಂದು ಬೆಳಿಗ್ಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.
ರಾತ್ರಿ ದೀಪಾರಾಧನೆ, ಹವಿಸು ಪೂಜೆ, ಭೂತಬಲಿ, ಶ್ರೀ ದೇವರ ನೃತ್ಯಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ನೃತ್ಯ ವೈವಿಧ್ಯ, ಅಪರಾಹ್ನ ಭರತ ನಾಟ್ಯ, ಬಳಿಕ ರಾತ್ರಿಯವರೆಗೆ ಭಜನಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ. ಶ್ಯಾಮ್ ಭಟ್ ಕೀಲಾರು, ದೇವಸ್ಥಾನದ ಮೊಕ್ತೇಸರ ಯಂ.ಬಿ. ಸದಾಶಿವ, ಗೌರವಾಧ್ಯಕ್ಷ ರಾಜಾರಾಮ ಕೀಲಾರು, ಅಧ್ಯಕ್ಷ ಜಯಕುಮಾರ ಚೆದ್ಕಾರ್, ಪವಿತ್ರವಾಣಿ ಕೆ.ಜಿ. ಗೋಪಾಲಕೃಷ್ಣ, ಕಾರ್ಯದರ್ಶಿ ಕೇಶವ ಚೌಟಾಜೆ, ಅರ್ಚಕ ಸತ್ಯನಾರಾಯಣ ಭಟ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಾರಾಮ ಕಳಗಿ, ಕೋಶಾಧಿಕಾರಿ ಲೋಹಿತ್ ಹೊದ್ದೆಟ್ಟಿ, ಆಡಳಿತ ಸಮಿತಿಯ ಸದಸ್ಯರುಗಳು, ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.