ಕುಡಿಯುವ ನೀರಿನ ಪೈಪ್ ಕಾಮಗಾರಿ ಸ್ಥಗಿತ : ನ.ಪಂ. ಕಛೇರಿ ಮುಂಭಾಗ ಬಿಜೆಪಿ ಸದಸ್ಯರಿಂದ ಪ್ರತಿಭಟನೆ

0

ಕಾಂಗ್ರೆಸ್ ಪಕ್ಷದ ಸದಸ್ಯರ ಮಾತು ಕೇಳಿ ಕಾಮಗಾರಿ ನಿಲ್ಲಿಸಿದ ಅಧಿಕಾರಿಗಳ ಕ್ರಮ ಸರಿಯಲ್ಲ : ವಿನಯ್ ಕುಮಾರ್ ಕಂದಡ್ಕ

ಕಾಮಗಾರಿ ನಿಲ್ಲಿಸಲು ಕಾಂಗ್ರೆಸ್ ಸದಸ್ಯರು ಕಾರಣಕರ್ತರಲ್ಲ : ಎಂ. ವೆಂಕಪ್ಪ ಗೌಡ

ಸಮಸ್ಯೆಗಳಿಲ್ಲದ ಪ್ರದೇಶದಲ್ಲಿ ಕಾಮಗಾರಿ ನಡೆಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ : ನ.ಪಂ.ಮುಖ್ಯಾಧಿಕಾರಿ

ಸುಳ್ಯ ನಗರದಲ್ಲಿ ಆರಂಭಗೊಂಡಿರುವ ಬೃಹತ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಕಾಂಗ್ರೆಸ್ ಪಕ್ಷದ ನ.ಪಂ. ಸದಸ್ಯರ ಮಾತು ಕೇಳಿ ಅಧಿಕಾರಿಗಳು ನಿಲ್ಲಿಸಿರುವುದು ಸರಿಯಲ್ಲ. ಇದರಿಂದ ಈ ಯೋಜನೆಗೆ ತುಂಬಾ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ನಿಲ್ಲಿಸಿರುವ ಕಾಮಗಾರಿಯನ್ನು ಇಂದೇ ಆರಂಭಿಸಬೇಕೆಂದು ಆಗ್ರಹಿಸಿ ನ.ಪಂ. ಬಿಜೆಪಿ ಬೆಂಬಲಿತ ಸದಸ್ಯರು ಎ.೨೦ರಂದು ಸುಳ್ಯ ನ.ಪಂ. ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ನ.ಪಂ.ಸದಸ್ಯ ವಿನಯ್ ಕುಮಾರ್ ಕಂದಡ್ಕ “ನೆಗಡಿಯಾಗಿದೆ ಎಂದು ಮೂಗನ್ನೇ ಕತ್ತರಿಸಿದಂತೆ ಎಂಬ ರೀತಿಯಲ್ಲಿ ನಮ್ಮ ಅಧಿಕಾರಿಗಳು ಈ ಬೃಹತ್ ಯೋಜನೆಯ ಕಾಮಗಾರಿಯನ್ನು ಕಾಂಗ್ರೆಸ್ ಬೆಂಬಲಿತ ಸದಸ್ಯರ ಮಾತನ್ನು ಕೇಳಿ ನಿಲ್ಲಿಸಿರುವುದು ಹಾಸ್ಯಸ್ಪದವಾಗಿದೆ. ಇವರು ಹೇಳುವಂತೆ ಬೇಸಿಗೆಯ ಕಾಲದಲ್ಲಿ ಮಾಡಬೇಕಾದಂತಹ ಈ ಬೃಹತ್ ಕಾಮಗಾರಿಯನ್ನು ಮಳೆಗಾಲದಲ್ಲಿ ಮಾಡಿದರೆ ಏನೆಲ್ಲಾ ಸಮಸ್ಯೆಗಳು ಬರಬಹುದು ಎಂಬುವುದನ್ನು ನಾವು ಆಲೋಚಿಸಬೇಕಾಗಿದೆ. ಆ ಸಂದರ್ಭದಲ್ಲಿ ಕುಡಿಯುವ ನೀರಿನ ಪೈಪ್ ಗಳು ಒಡೆದು ಹೋದರೆ ಅದನ್ನು ಹುಡುಕಾಡುವುದು ಕಷ್ಟವಾಗುತ್ತದೆ. ಅಲ್ಲದೇ ಪೈಪ್ ಗಳನ್ನು ಅಳವಡಿಸಲು ರಸ್ತೆ ಬದಿಯಲ್ಲಿ ಬೃಹತ್ ಗುಂಡಿಗಳನ್ನು ತೋಡಿದರೆ ಅದರಿಂದ ಉಂಟಾಗುವ ಅನಾಹುತಗಳು ನೂರಾರು ಇರುತ್ತದೆ. ಆದ್ದರಿಂದ ಬೇಸಿಗೆಯ ಕಾಲ ಕಾಮಗಾರಿಗೆ ಸಮರ್ಪಕ ಸಮಯವಾಗಿದ್ದು ಇಷ್ಟು ದೊಡ್ಡ ಕಾಮಗಾರಿ ನಡೆಯುವ ವೇಳೆ ಸಣ್ಣಪುಟ್ಟ ತೊಂದರೆಗಳು ಸಹಜವಾಗಿ ಇರುತ್ತದೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳು ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುವುದು ಬಿಟ್ಟು ಕಾಮಗಾರಿಯನ್ನೇ ಸದ್ಯಕ್ಕೆ ನಿಲ್ಲಿಸುವಂತೆ ಗುತ್ತಿಗೆದಾರರು ಸೂಚನೆ ನೀಡಿರುವುದು ಸರಿಯಲ್ಲ ಎಂದು ಹೇಳಿದರು. ಈ ಕಾಮಗಾರಿಯನ್ನು ಇಂದೇ ಆರಂಭಿಸದಿದ್ದಲ್ಲಿ ಇಲ್ಲಿಂದ ನಾವುಗಳು ಎದ್ದೇಳುವ ಪ್ರಶ್ನೆಯೇ ಇಲ್ಲ ಎಂದು ಆಗ್ರಹಿಸಿದರು.

ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ನ.ಪಂ. ಕಾಂಗ್ರೆಸ್ ಸದಸ್ಯ ಎಂ.ವೆಂಕಪ್ಪ ಗೌಡ ಇಲ್ಲಿ ನಮ್ಮ ಸಹೋದರ – ಸಹೋದರಿಯರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿದಾಗ ವಿಚಾರಿಸಿಕೊಳ್ಳಲು ಬಂದಿದ್ದೇನೆ . ಇಲ್ಲಿಗೆ ಬಂದ ಬಳಿಕ ಯಾವ ವಿಷಯದ ಬಗ್ಗೆ ಈ ಪ್ರತಿಭಟನೆ ಎಂದು ತಿಳಿಯಿತು. ಆದರೆ ಇವರು ಮಾಡುತ್ತಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದದ್ದು . ನಾವು ಕಾಂಗ್ರೆಸ್ ಸದಸ್ಯರು ಕಾಮಗಾರಿಯನ್ನು ನಿಲ್ಲಿಸುವಂತೆ ಎಲ್ಲಿಯು ಹೇಳಲಿಲ್ಲ. ಸುಳ್ಯದ ಜನತೆಗೆ ಈ ಬಿಸಿಲಿನ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದುರಾದಾಗ ನಮ್ಮ ಬಳಿ ಮತ್ತು ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಚುನಾವಣೆ ಸಂದರ್ಭ ಇರುವ ಹಿನ್ನಲೆಯಲ್ಲಿ ಮತದಾನ ದಿನ ಕಳೆಯುವವರೆಗೆ ನೀರಿನ ಸಮಸ್ಯೆ ಮತ್ತು ರಸ್ತೆಗಳಲ್ಲಿ ಇತರ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬೇಕೆಂದು ಅಧಿಕರಿಗಳ ಬಳಿ ನಾವು ವಿನಂತಿಯನ್ನು ಮಾಡಿಕೊಂಡಿದ್ದೆವು. ಅದು ಬಿಟ್ಟು ಕಾಮಗಾರಿಯನ್ನು ನಿಲ್ಲಿಸುವಂತೆ ನಾವು ಎಲ್ಲಿಯು ಹೇಳಲಿಲ್ಲ ಎಂದು ಹೇಳಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ಬಂದ ನ.ಪಂ. ಮುಖ್ಯ ಅಧಿಕಾರಿ ಬಿ.ಎನ್. ಡಾಂಗೆ ಪ್ರತಿಭಟನಾಕಾರರನ್ನು ಸಮಾಧಾನ ಪಡೆಸಿ ಕಾಮಗಾರಿಯನ್ನು ಆರಂಭಿಸುವ ಭರವಸೆಯನ್ನು ನೀಡಿ ಕಛೇರಿಯೊಳಗೆ ಕರೆದೊಯ್ದರು. ಈ ವೇಳೆ ಮಾತನಾಡಿದ ಅವರು ರಥಬೀದಿಯಲ್ಲಿ ಕಾಮಗರಿ ನಡೆಯುತ್ತಿರುವ ಸಂದರ್ಭ ಅದೇ ವೇಳೆ ತಾಲೂಕು ಕಛೇರಿಯಲ್ಲಿ ಚುನಾವಣಾ ವಿಷಯ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಯುತ್ತಿತ್ತು. ಈ ವೇಳೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಬಿಎಸ್‌ಎನ್‌ಎಲ್ ಕೇಬಲ್‌ಗೆ ಜೆಸಿಬಿಯ ಕೊಕ್ಕೆ ತಾಗಿ ತುಂಡಾಗಿದ್ದು ಸಭೆ ಅರ್ಧದಲ್ಲಿ ಸ್ಥಗಿತಗೊಂಡಿತ್ತು. ಅಲ್ಲದೇ ಇದೇ ರಸ್ತೆಯ ಮೂಲಕ ಮತದಾನದ ದಿನ ಸ್ಟ್ರಾಂಗ್ ರೂಮ್ ಗೆ ಬರಲು ಸಮಸ್ಯೆ ಆಗುವ ಹಿನ್ನಲೆಯಲ್ಲಿ ಆ ರಸ್ತೆಯ ಕಾಮಗಾರಿಯನ್ನು ಸದ್ಯಕ್ಕೆ ನಿಲ್ಲಿಸುವಂತೆ ನಾವು ಸೂಚಿಸಿದ್ದೇವೆ. ಅಲ್ಲದೇ ಬೇರೆಡೆ ಕೆಲಸ ಮಾಡುವುದಕ್ಕೆ ಅಭ್ಯಂತರವಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದರು. ಪ್ರತಿಭಟನೆಯಲ್ಲಿ ನ.ಪಂ.ಸದಸ್ಯರುಗಳಾದ ಶಶಿಕಲಾ ಎ., ಕಿಶೋರಿ ಶೇಟ್, ಶೀಲಾ ಕುರುಂಜಿ, ಶಿಲ್ಪಾ ಸುದೇವ್ , ಸರೋಜಿನಿ ಪೆಲ್ತಡ್ಕ, ಪ್ರವೀತ, ಪೂಜಿತ, ಸುಶೀಲ, ಸುಧಾಕರ, ಬುದ್ಧ ನಾಯ್ಕ, ಭಾಗವಹಿಸಿದರು.