ಕೃಷಿಕರು ಕೋವಿಗಳನ್ನು ಠಾಣೆಗಳಲ್ಲಿ ಡೆಪಾಸಿಟ್ ಇರಿಸುವ ವಿಷಯದ ಕುರಿತು ಜಿಲ್ಲೆಯ ಸುಮಾರು ೧೯೭ ರೈತರಿಗೆ ವಿನಾಯಿತಿ ನೀಡಿ ಸ್ಕ್ರೀನಿಂಗ್ ಕಮಿಟಿ ಮತ್ತು ಹೈಕೋರ್ಟ್ ಆದೇಶ ಮಾಡಿದ ಹಿನ್ನೆಲೆಯಲ್ಲಿ ವಿನಾಯಿತಿ ಸಿಕ್ಕಿದ ಕೃಷಿಕರು ಇಂದು ಸುಳ್ಯ ಪೊಲೀಸ್ ಠಾಣೆಗೆ ಬಂದು ತಾವು ಇರಿಸಿದ್ದ ಕೋವಿಗಳನ್ನು ಮರಳಿ ಪಡೆದುಕೊಂಡರು.
ಚುನಾವಣೆಯ ಸಂದರ್ಭ ಕೋವಿ ಡೆಪಾಸಿಟ್ ಇಡುವ ಪರಿಪಾಠದಿಂದ ತೊಂದರೆಗೊಳಗಾಗುವ ರೈತರು ನ್ಯಾಯವಾದಿ ಎಂ.ವೆಂಕಪ್ಪ ಗೌಡರು ಮತ್ತು ಅಂಬಿಕಾ ಪ್ರಿಂಟರ್ಸ್ ನ ಪಿ.ಎಸ್.ಗಂಗಾಧರ್ ರವರ ನೇತೃತ್ವದಲ್ಲಿ ಶಿವಕೃಪಾ ಕಲಾಮಂದಿರದಲ್ಲಿ ಸಭೆ ಸೇರಿ ಚರ್ಚಿಸಿ ಸಹಾಯಕ ಚುನಾವಣಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು. ಸ್ಪಂದನ ಕಂಡುಬರದಿದ್ದಾಗ ತಾಲೂಕು ಕಚೇರಿಯ ಎದುರು ಸುಮಾರು ೨೦೦ ರಷ್ಟು ರೈತರು ಸೇರಿ ಹಕ್ಕೊತ್ತಾಯ ಮಾಡಿದ್ದರು. ಆದರೂ ಸ್ಪಂದನ ಕಾಣದಿದ್ದಾಗ ನ್ಯಾಯವಾದಿಗಳಾದ ಎಂ.ವೆಂಕಪ್ಪ ಗೌಡ ಮತ್ತು ಪ್ರದೀಪ್ ಕೆ.ಎಲ್. ರವರ ಮಾರ್ಗದರ್ಶನದಂತೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದರು. ರೈತರ ಪರವಾಗಿ ಹೈಕೊರ್ಟಲ್ಲಿ ನ್ಯಾಯವಾದಿಗಳಾದ ಪಿ.ಪಿ.ಹೆಗ್ಡೆ ಹಾಗೂ ಸರಿಲ್ ಪ್ರಸಾದ್ ಪಾಯಸ್ ವಾದಿಸಿದ್ದರು. ಈ ನಡುವೆ ರವಿಶಂಕರ್ ಕೊಡೆಂಕಿರಿ ಮತ್ತು ಶ್ರೀಹರಿ ಮೊದಲಾದ ನ್ಯಾಯವಾದಿಗಳು ವೈಯಕ್ತಿಕ ವಾಗಿ ವಕಾಲತು ನೀಡಿದ ರೈತರ ಪರವಾಗಿ ವಾದಿಸಿ ಕೋವಿ ಠೇವಣಾತಿಯಿಂದ ವಿನಾಯಿತಿ ಪಡೆದಿದ್ದರು.
ರೈತರ ಅರ್ಜಿಗಳನ್ನು ಪಡೆದು ಠೇವಣಾತಿ ವಿನಾಯಿತಿಗೆ ಸೂಕ್ತ ಆದೇಶ ಮಾಡುವಂತೆ ಜಸ್ಟಿಸ್ ನಾಗಪ್ರಸನ್ನರವರ ಏಕಸದಸ್ಯ ಪೀಠವು ನೀಡಿದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ನೇತೃತ್ವದ ಸ್ಕ್ರೀನಿಂಗ್ ಕಮಿಟಿಯು ರೈತರಿಂದ ಪುನಹ ಅರ್ಜಿ ಪಡೆದು ಅರ್ಜಿ ನೀಡಿದ ೧೯೭ ಮಂದಿಗೆ ವಿನಾಯಿತಿ ನೀಡಿ ಆದೇಶ ಮಾಡಿದೆ. ಈ ಹಿಂದೆ ಸುಳ್ಯ ೩೦೭ ಮಂದಿ ವಿನಾಯಿತಿಗಾಗಿ ಅರ್ಜಿ ಹಾಕಿದ್ದಾಗ ಕೇವಲ ೭ ಮಂದಿಯ ಅರ್ಜಿಯನ್ನು ಮಾತ್ರ ಪುರಸ್ಕರಿಸಿದ್ದ ಸ್ಕ್ರೀನಿಂಗ್ ಕಮಿಟಿಯ ಈಗ ಹೈಕೋರ್ಟ್ ನಿರ್ದೇಶನದ ಬಳಿಕ ಅರ್ಜಿ ಹಾಕಿದ ಜಿಲ್ಲೆಯ ೧೯೭ ಮಂದಿಗೆ ಕೂಡ ಕೋವಿ ಠೇವಣಾತಿಯಿಂದ ವಿನಾಯಿತಿ ನೀಡಿದೆ. ಅವರಲ್ಲಿ ೧೨೮ ಮಂದಿ ಸುಳ್ಯದವರು. ೫೪ ಮಂದಿ ಕಡಬ ತಾಲೂಕಿನವರು ಎಂದು ತಿಳಿದುಬಂದಿದೆ.
ಹೋರಾಟಕ್ಕೆ ತಮ್ಮ ಜತೆ ಬಂದ ರೈತರಿಗೆ ನ್ಯಾಯವಾದಿ ಎಂ.ವೆಂಕಪ್ಪ ಗೌಡರು ಧನ್ಯವಾದ ಸಲ್ಲಿಸಿದ್ದರಲ್ಲದೆ, ತಮಗೆ ನೆರವಾದ ನ್ಯಾಯವಾದಿ ಪ್ರದೀಪ್ ಕೆ.ಎಲ್. ಮತ್ತು ರೈತರ ಪರವಾಗಿ ಹೈಕೋರ್ಟಲ್ಲಿ ವಾದಿಸಿದ ನ್ಯಾಯವಾದಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಹಾಕಲು ಬಾಕಿ ಇರುವವರು ತಕ್ಷಣ ಅರ್ಜಿ ಹಾಕಿದರೆ ರಿಲೀಫ್ ದೊರಕಿಸಲು ಸಾಧ್ಯವಾಗಬಹುದು ಎಂದು ನ್ಯಾಯವಾದಿ ಪ್ರದೀಪ್ ಕೆ.ಎಲ್. ತಿಳಿಸಿದ್ದಾರೆ.