ಜ್ಞಾನಿಗಳು ಭಗವಂತನಿಗೆ ಹೆಚ್ಚು ಪ್ರೀತಿ ಪಾತ್ರರು – ವಿಧುಶೇಖರಭಾರತೀ ಶ್ರೀಗಳು
ಬೇರೆ ಬೇರೆ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸುವುದಕ್ಕಾಗಿ ಭಕ್ತರು ದೇವರ ಹತ್ತಿರ ಹೋಗುತ್ತಾರೆ. ಇವರೆಲ್ಲರೂ ದೇವರಿಗೆ ಪ್ರಿಯರೇ ಆದರೂ ಯಾವುದೇ ಬೇಡಿಕೆಗಳಿಲ್ಲದೆ ನನ್ನ ಸರ್ವಸ್ವವೂ ನೀನೆ, ನನಗೆ ಏನು ಬೇಕೆಂದು ತಿಳಿದು ಅನುಗ್ರಹಿಸು ದೇವರೆ ಎಂದು ದೇವರ ಪಾದಕ್ಕೆ ಶರಣಾದವರು ದೇವರಿಗೆ ಅತಿ ಪ್ರಿಯರು. ನಾವು ಮಾಡುವ ಕರ್ಮಗಳಿಗೆ ಅನುಗುಣವಾಗಿ ನಮಗೆ ಪ್ರತಿಫಲ ಸಿಕ್ಕಿಯೇ ಸಿಗುತ್ತದೆ. ದೇವರ ದರ್ಶನಕ್ಕೆ ಬರುವಾಗಲಾದರೂ ಲೌಕಿಕ ವ್ಯವಹಾರಗಳನ್ನು ಬದಿಗಿಟ್ಟು ದೇವರಲ್ಲಿ ಮನಸ್ಸನ್ನು ಲೀನವಾಗಿಸಿ ಎಂದು ಶೃಂಗೇರಿ ಪೀಠಾಧೀಶರಾದ ಶ್ರೀಮಜ್ಜಗದ್ಗರು ಶ್ರೀ ಶ್ರೀ ವಿಧುಶೇಖರಭಾರತೀ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಹೇಳಿದರು. ಅವರು ಎ. 26, 27ರಂದು ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಎ. 26ರಂದು ಸಂಜೆ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ ಶ್ರೀ ಗುರುಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಧೂಳಿಪಾದಪೂಜೆ, ಫಲ ಸಮರ್ಪಣೆ, ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಪುಷ್ಪಾಂಜಲಿ, ಮಂಗಳಾರತಿ, ಅನ್ನಸಂತರ್ಪಣೆ ನಡೆಯಿತು. ಎ. 27ರಂದು ಶ್ರೀ ತ್ರಿಶೂಲಿನೀ ಸನ್ನಿಧಿಯಲ್ಲಿ ಬೆಳಿಗ್ಗೆ ಪ್ರಸನ್ನ ಪೂಜೆ, ಸಾರ್ವಜನಿಕರಿಂದ ಪಾದಪೂಜೆ – ಭಿಕ್ಷಾವಂದನೆ, ಶ್ರೀ ಜಗದ್ಗುರುಗಳ ಅನುಗ್ರಹಭಾಷಣ ನಡೆಯಿತು. ದೇವಸ್ಥಾನದ ಧಾರ್ಮಿಕ ಉತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ಸ್ವಾಗತಿಸಿದರು. ಮಂಜುನಾಥ ಎಂ.ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಸಮಸ್ತಭಕ್ತರಿಗೆ ಫಲಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು.