ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಯ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ನೂತನ ಎಇಒ ಹೆಸರು

0

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ  ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆಗೊಂಡು ಬಂದು ಅಧಿಕಾರ ಸ್ವೀಕರಿಸಿರುವ ಯೇಸು ರಾಜ್ ಅವರ ಹೆಸರಿನ ಕಾರಣಕ್ಕೆ , ಇವರನ್ನು ಕ್ರಿಶ್ಚಿಯನ್ ಎಂದು ಗುರುತಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸರಕಾರದ ನಡೆಯನ್ನು ಒಂದು ವರ್ಗ ಟೀಕಿಸಿದ ಹಾಗೂ ಆ ಬಳಿಕ ಈ ಅಧಿಕಾರಿ ಹಿಂದೂ ಎನ್ನುವುದಕ್ಕೆ ಪುರಾವೆಯಾಗಿ ಪ್ರಮಾಣಪತ್ರವೂ ಸೋಧಿಯಲ್ ಮೀಡಿಯಾದಲ್ಲಿ ವೈರಲ್ ಆದ ಘಟನೆ ನಡೆದಿದೆ.

ಸುಬ್ರಹ್ಮಣ್ಯ ದೇಗುಲಕ್ಕೆ ಯೇಸುರಾಜ್ ಎಂಬವರು ರಾಮ ನಗರದಿಂದ ವರ್ಗಾವಣೆಗೊಂಡು ಬಂದಿದ್ದರು. ಈ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಮಾಧ್ಯಮಗಳ ವರದಿಯ ತುಣುಕನ್ನು ಹಾಕಿ ಹಿಂದೂ ಮುಖಂಡರ ಸಹಿತ ಹಲವರು, ಹಿಂದೂ ದೇವಾಯಗಳಲ್ಲಿ ಕ್ರಿಶ್ಚಿಯನ್ ಅಧಿಕಾರಿಯ ನೇಮಕ ಸರಿಯೇ? ಸರಕಾರ ಸ್ಪಷ್ಟನೆ ನೀಡಬೇಕು ಎಂಬರ್ಥದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ಇದಕ್ಕೆ ನೂರಾರು ಮಂದಿ ಕಮೆಂಟ್ ಹಾಕಿ ಸರಕಾರ ಮತ್ತು ಮುಜರಾಯಿ ಇಲಾಖೆಯನ್ನು ಬಯ್ಯುತ್ತಿದ್ದರು.‌

ಇದಾದ ಕೆಲವೇ ಹೊತ್ತಿನಲ್ಲಿ ಈ ಅಧಿಕಾರಿ ಹಿಂದೂ ಧರ್ಮದವರೇ ಎನ್ನುವುದು ಪುರಾವೆ ಸಹಿತ ಬಹಿರಂಗವಾಯಿತು.

ಯೇಸುರಾಜ್ ಅವರು ಹಿಂದೂ ಧರ್ಮದವರೇ ಅಗಿದ್ದು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ.‌ ಜವರಯ್ಯ ಎಂಬವರ ಪುತ್ರರಾಗಿದ್ದಾರೆ ಎಂಬ ಮಾಹಿತಿಯನ್ನು ಅವರ ಪ್ರಮಾಣಪತ್ರವೊಂದನ್ನು ಆಧರಿಸಿ ವೈರಲ್ ಮಾಡಲಾಯಿತು.

ಯೇಸುರಾಜ್ ಅವರು ಮೈಸೂರು ಜಿಲ್ಲೆಯ ಅಂಬೆಡ್ಕರ್ ನಗರ ಟೌನ್, ಕೆ.ಆರ್ ನಗರ, ವಾರ್ಡ್ ನಂ. 12 ನೇ ವಾರ್ಡಿನ ಕಸಬಾ ಹೋಬಳಿ ಯ ನಿವಾಸಿಯಾಗಿದ್ದಾರೆ ಎಂಬ ಮಾಹಿತಿ ಪ್ರಮಾಣಪತ್ರದಲ್ಲಿದೆ.