ಮಂಗಳೂರು ವೆನ್ಲಾಕ್ ಅಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿದ್ದ ದಂಬೆಕೋಡಿ ಡಿ‌.ಆರ್. ಸುನಂದ ನಿವೃತ್ತಿ

0

ಜಿಲ್ಲಾ ವೆನ್ಲಾಕ್ ಅಸ್ಪತ್ರೆಯಲ್ಲಿ ನರ್ಸಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗುತ್ತಿಗಾರಿನ ದಂಬೆಕೋಡಿ ಡಿ‌.ಆರ್.ಸುನಂದರವರು ಎ. 30 ರಂದು ಸೇವಾ ನಿವೃತ್ತಿ ಹೊಂದಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಶುಂಠಿಕೊಪ್ಪ ದೇವಸ್ಯ ಮನೆ ದಿ.ರಾಮಣ್ಣ ಹಾಗೂ ದಿ.ಜಾನಕಿ ದಂಪತಿಯ ಪುತ್ರಿಯಾಗಿರುವ ಸುನಂದರವರು ಪ್ರಾಥಮಿಕ ಶಿಕ್ಷಣವನ್ನು ಗುಂಡುಗುಟ್ಟಿಯಲ್ಲಿ, ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಮಾದಾಪುರದಲ್ಲಿ ಪೂರೈಸಿ ಬಳಿಕ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಸ್ಕೂಲ್ ನಲ್ಲಿ ನರ್ಸಿಂಗ್ ಪದವಿ ಪಡೆದರು.


ನರ್ಸಿಂಗ್ ಮುಗಿದ ಕೂಡಲೇ ಉಳ್ಳಾಲ ನರ್ಸಿಂಗ್ ಹೋಮ್ ನಲ್ಲಿ ಅಲ್ಪಸಮಯದ ಸೇವೆ ಸಲ್ಲಿಸಿ, 1991 ರಿಂದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಸ್ಟಾಫ್ ಆಗಿ 11 ವರ್ಷಗಳ ಸೇವೆ ಸಲ್ಲಿಸಿದರು. ಈ ವೇಳೆ ಇ.ಎನ್ ಟಿ ವರ್ಕ್ ಶಾಪ್ ನಲ್ಲಿ ಬೆಸ್ಟ್ ಓಟಿ ಸ್ಟಾಫ್ ಪುರಸ್ಕಾರಕ್ಕೆ ಪಾತ್ರರಾದರು. 2001ರಲ್ಲಿ ಸರಕಾರಿ ಸೇವೆ ಆರಂಭಿಸಿದ ಇವರು ಮೈಸೂರಿನ ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸಿದರು. ಬಳಿಕ ಮಂಗಳೂರಿನ ಜಿಲ್ಲಾ ಆಯುರ್ವೇದ ಮತ್ತು ಹೋಮಿಯೋಪತಿ ಸಂಯುಕ್ತ ಆಸ್ಪತ್ರೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿದರು. ಬಳಿಕ ಜಿಲ್ಲಾ ಆಯುಷ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮಂಗಳೂರು ಇಲ್ಲಿಗೆ ಸ್ಥಳಾಂತರವಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಮಾತೃ ಇಲಾಖೆ ಜಿಲ್ಲಾ ವೆನ್ಲಾಕ್ ಅಸ್ಪತ್ರೆಯಲ್ಲಿ ಏಳು ತಿಂಗಳ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತಿ ಹೊಂದಿದ್ದಾರೆ.

ತಮ್ಮ ಸೇವಾ ಅವಧಿಯಲ್ಲಿ ಹಲವಾರು ಪ್ರಶಸ್ತಿ ಪಡೆದಿರುವ ಇವರು 1984ರಲ್ಲಿ ಸ್ಕೂಲ್ ಆಫ್ ನರ್ಸಿಂಗ್ ಕಲಿಕೆಯ ಸಮಯದಲ್ಲಿ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ , 1985 ರಲ್ಲಿ ಸ್ಟೂಡೆಂಟ್ ನರ್ಸಸ್ ಅಸೋಸಿಯೇಷನ್ ಕಲ್ಚರಲ್ ಲೀಡರ್ ಆಗಿ, 2018 ರಲ್ಲಿ ಬೆಂಗಳೂರಿನ ಆಯುಷ್ ಡೈರೆಕ್ಟರೇಟ್ ತರಬೇತಿಯ ಸಮಯದಲ್ಲಿ ಬೆಸ್ಟ್ ಆಲ್ ರೌಂಡರ್ ಪಾರ್ಟಿಸಿಪೆಂಟ್ ಪುರಸ್ಕಾರ,
2020ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಶಾಲಾ ದಿನಗಳಿಂದಲೇ ಉತ್ತಮ ಕ್ರೀಡಾಪಟುವಾಗಿ, ತ್ರೋಬಾಲ್ ತಂಡದ ನಾಯಕಿಯಾಗಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ, ಸಮಾರಂಭದಲ್ಲಿ ವೇದಿಕೆಯಲ್ಲಿ ಮೇಲ್ವಿಚಾರಕರಾಗಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಲವು ಬಹುಮಾನ ಪಡೆದಿರುತ್ತಾರೆ. ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 60 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸರಕಾರಿ ನೌಕರರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಕಾರ್ಯಕ್ರಮ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು.

ಆಯುಷ್ ಇಲಾಖೆಯಲ್ಲಿ ವಿಶೇಷ ಸಾಧನೆಗಾಗಿ ಎಂ.ಎಲ್ಸಿ, ಡಿ.ಸಿ ಯವರಿಂದ ಪ್ರಶಸ್ತಿ ಸ್ವೀಕಾರ, ಮಾಸ್ಟರ್ಸ್ ಅಥ್ಲೆಟಿಕ್ಸ್ ನಲ್ಲಿ ರಾಜ್ಯ ರಾಷ್ಟ್ರಮಟ್ಟದಲ್ಲಿ ಬಹುಮಾನ, ಆಲ್ ಇಂಡಿಯಾ ಸಿವಿಲ್ ಸರ್ವಿಸ್ ಹೈದರಾಬಾದಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಡಿಸ್ಕಸ್ ತ್ರೋನಲ್ಲಿ ಬಹುಮಾನ ಪಡೆದಿರುತ್ತಾರೆ.
ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಕರಕುಶಲ ವಸ್ತು ಪ್ರದರ್ಶನದಲ್ಲಿ ಸತತವಾಗಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದು ಅದಕ್ಕಾಗಿ ಹಲವು ಬಾರಿ ಗೌರವ ಪಡೆದಿರುತ್ತಾರೆ.

ಕೊರೋನ ಸಮಯದಲ್ಲಿ ಸ್ವತಹ ತಾವೇ ಬೆಳೆದಂತಹ ಗಿಡ ಗಿಡಮೂಲಿಕೆಗಳ ಕಷಾಯವನ್ನು ತಯಾರಿಸಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ರೋಗಿಗಳಿಗೆ ಸ್ವತಹ ಖರ್ಚಿನಲ್ಲಿ ಅವರಿಗೆ ಸರಬರಾಜು ಮಾಡುತ್ತಿದ್ದರು. ಅನಾಥಾಶ್ರಮ ಸ್ಕೂಲ್ ಗಳಿಗೆ ಭೇಟಿ ನೀಡಿ ಔಷಧಿ ವಿತರಣೆ ಹಾಗೂ ಉಚಿತ ಮಾಹಿತಿ ಶಿಬಿರದಲ್ಲಿ ಭಾಗವಹಿಸಿರುವುದು ಇವರು ಬೆಳೆಸಿಕೊಂಡ ಪ್ರವೃತ್ತಿ.

2019 ರಿಂದ 2024 ರವರೆಗೆ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ನಾಮ ನಿರ್ದೇಶಕ ಕಾರ್ಯಕಾರಿ ಸದಸ್ಯರಾಗಿ,
ದ. ಕ. ಜಿಲ್ಲಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ದ. ಕ. ಜಿಲ್ಲಾಸರಕಾರಿ ಮಹಿಳಾ ನೌಕರರ ವಸತಿ ಗೃಹದಲ್ಲಿ ಕಾರ್ಯದರ್ಶಿಯಾಗಿ, ನರ್ಸಸ್ ಅಸೋಶಿಯೇಷನ್ ಮೆಂಬರ್ ಆಗಿ, ದ.ಕ. ಜಿಲ್ಲಾ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಪ್ರಧಾನ ಘಟಕದಲ್ಲಿ ನಿರ್ದೇಶಕರಾಗಿ, ದ.ಕ.ಜಿಲ್ಲಾ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಮಹಿಳಾ ಘಟಕದ ಖಜಾಂಚಿಯಾಗಿ, ಇದೀಗ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

2020ರಲ್ಲಿ ಸ್ವ ಇಚ್ಛೆಯಿಂದ ಅಂಗಾಂಗ ದಾನಕ್ಕಾಗಿ ಪತ್ರ ವಾಗ್ದಾನ ಬರೆದಿರುತ್ತಾರೆ.

ಗುತ್ತಿಗಾರು ಗ್ರಾಮದವರಾಗಿದ್ದು ಮಾಜಿ ಯೋಧರಾಗಿರುವ ಗಂಗಾಧರ ದಂಬೆಕೋಡಿ ಅವರ ಪತ್ನಿಯಾಗಿರುವ ಸುನಂದರವರ ಅವಳಿ ಗಂಡು ಮಕ್ಕಳಾದ ಕಾರ್ತಿಕ್, ಕೀರ್ತನ್ ಇಬ್ಬರೂ ಇಂಜೆನಿಯರ್ ಗಳಾಗಿದ್ದಾರೆ. ಸೊಸೆಯಂದಿರಾದ ಚೈತ್ರ ಕಾರ್ತಿಕ್ ಇಂಜಿನಿಯರ್ ಆಗಿದ್ದು, ಶ್ವೇತ ಕೀರ್ತನ್ ಸಹಕಾರಿ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ.