‘ಪ್ರಜ್ವಲ್ ಎಲ್ಲಿದ್ದೀಯಪ್ಪಾ’ ಅಬಲೆಯರನ್ನು ಗೌರವಿಸೋಣ – ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ: ಮೇ 13 ಹಾಸನ ಚಲೋ

0

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ವತಿಯಿಂದ ಸುಳ್ಯದಲ್ಲಿ ಪತ್ರಿಕಾಗೋಷ್ಠಿ

‘ಪ್ರಜ್ವಲ್ ಎಲ್ಲಿದ್ದೀಯಪ್ಪಾ’ ಅಬಲೆಯರನ್ನು ಗೌರವಿಸೋಣ, ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ ಎಂಬ ಧ್ಯೇಯದೊಂದಿಗೆ ಮೇ 13ರಂದು ಹಾಸನ ಚಲೋ ಪ್ರತಿಭಟನೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹಮ್ಮಿಕೊಂಡಿದೆ ಎಂದು ಪಕ್ಷದ ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಂಜಿನಿ ಎಂ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದ್ದಾರೆ.


ಈ ವೇಳೆ ಮಾತನಾಡಿದ ಅವರು ಪ್ರಜ್ವಲ್ ತನ್ನ ಬಳಿಗೆ ಸಹಾಯ ಯಾಚಿಸಿ ಬಂದ ಹಾಸನ ಜಿಲ್ಲೆಯ ನೂರಾರು ಹೆಣ್ಣು ಮಕ್ಕಳನ್ನು ಅಧಿಕಾರ ಮತ್ತು ಸಾಂದರ್ಭಿಕ ಲಾಭ ಪಡೆದು ಲೈಂಗಿಕವಾಗಿ ಶೋಷಣೆ ಮಾಡಿರುವುದು ದುರ್ದೈವದ ವಿಚಾರವಾಗಿದೆ. ಜವಾಬ್ದಾರಿಯುತ ಸಂಸದ ಸ್ಥಾನದಲ್ಲಿರುವ ಪ್ರಜ್ವ‌ಲ್ ಸಹಾಯ ಕೋರಿ ಬಂದವರನ್ನು ಶೋಷಣೆ ಮಾಡಿದ್ದು ನೂರಾರು ಹೆಣ್ಣು ಮಕ್ಕಳು ಇಲ್ಲಿ ಬಲಿಪಕುಗಳಾಗಿದ್ದಾರೆ.ಹಾಗೆಯೇ ತನ್ನ ಜವಾಬ್ದಾರಿಯುತ ಸಂಸದ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಅಸಹಾಯಕ ಹೆಣ್ಣು ಮಕ್ಕಳನ್ನು ಶೋಷಣೆಗೊಳಪಡಿಸಿದ್ದಲ್ಲದೆ ವಿಡಿಯೋ ಮಾಡಿಕೊಂಡು ವಿಕೃತಿ ಮೆರೆದಿರುವ ಪ್ರಜ್ವಲ್ ರೇವಣ್ಣ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದರ ಮೂಲಕ ಮುಂದೆ ಯಾವುದೇ ಜವಾಬ್ದಾರಿಯುತ ಜನಪ್ರತಿನಿಧಿಯಾಗಲಿ, ಇತರರೇ ಆಗಲಿ ಇಂತಹ ಕೃತ್ಯಗಳನ್ನು ಆಗದಂತೆ ತಡೆಯೊಡ್ಡಬೇಕಾಗಿದೆ. ಆದ್ದರಿಂದ ಕೆ ಆರ್ ಎಸ್ ಪಕ್ಷ ಇಂತಹ ಕೃತ್ಯಗಳಿಗೆ ಸದಾ ಹೋರಾಟಕ್ಕೆ ಸಿದ್ಧವಾಗಿರುತ್ತದೆ ಎಂದು ಅವರು ಹೇಳಿದರು. ಕೇವಲ ಪ್ರಭಾವೀ ಕೌಟುಂಬಿಕ ಹಿನ್ನೆಲೆಯ ಮೇರೆಗೆ ರಾಜಕೀಯವಾಗಿ ಗೊತ್ತುಗುರಿಯಿಲ್ಲದ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳು ಚುನಾವಣೆಗೆ ನಿಲ್ಲಿಸಿ, ಚುನಾವಣೆ ಗೆಲ್ಲುವ ಕಾರಣಗಳಿಂದಾಗಿಯೇ ನಡೆಯುತ್ತಿರುವುದನ್ನು ನಾವು ಗದುನಿಸಬೇಕು ಆದ್ದರಿಂದ ಪ್ರಜಾತಂತ್ರಕ್ಕೆ ಬಂದೆರಗಿರುವ ಘೋರ ಕಾಯಿಲೆಯನ್ನು ನಿರ್ಮೂಲನೆ ಮಾಡುವ ಸಂಕಲ್ಪಕ್ಕೆ ಮುಂದಾಗಬೇಕಿದೆ ಎಂದು ಅವರು ಹೇಳಿದರು.


ಪೆನ್ ಡ್ರೈವ್ ಪ್ರಕರಣವು ಪಾರದರ್ಶಕವಾಗಿ ತನಿಖೆ ಆಗುವಂತೆ ನಾವು ಸರ್ಕಾರವನ್ನು ಆಗ್ರಹಿಸುತ್ತಿದ್ದು ಪಾರದರ್ಶಕ, ನಿಷ್ಪಕ್ಷಪಾತವಾಗಿ ತನಿಖೆಯಾದಲ್ಲಿ ಮಾತ್ರ ಸಂತ್ರಸ್ತರಿಗೆ ಇದರಲ್ಲಿ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು. ಪ್ರಕರಣದ ತನಿಖೆ ಮುಗಿಯುವವರೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸಿ ಪ್ರಕರಣದ ಸಾಕ್ಷಗಳನ್ನು ತಿರುಚುವ, ಬೆದರಿಸುವುದನ್ನು ತಪ್ಪಿಸಬೇಕೆಂದು KRS ಪಕ್ಷ ಆಗ್ರಹಿಸುತ್ತದೆ.

ಸಂತ್ರಸ್ತ ಮಹಿಳೆಯೋರ್ವರು ಪ್ರಜ್ವಲ್ ಮತ್ತು ರೇವಣ್ಣ ಅವರ ಮೇಲೆ ಹೊಳೆನರಸೀಪುರ ಠಾಣೆಯಲ್ಲಿ ದೂರು ನೀಡಿ, ಮೊಕದ್ದಮೆ ದಾಖಲಾದ ಹತ್ತಾರು ಗಂಟೆಗಳ ನಂತರ ಆತ ವಿದೇಶಕ್ಕೆ ಪರಾರಿಯಾಗಿರುವುದನ್ನು ಅದನ್ನು ತಪ್ಪಿಸಬಹುದಾಗಿದ್ದ ಅವಕಾಶವನ್ನು ಪೊಲೀಸ್ ಇಲಾಖೆಯ ಅಧಿಕಾರಿಗಳು ಬಳಸದೇ ಇರುವುದನ್ನು ಗಮನಿಸಿದರೆ ಕೆಳಹಂತದ ಸಿಬ್ಬಂದಿಯಿಂದ ಹಿಡಿದು ಉನ್ನತ ಅಧಿಕಾರಿಗಳವರೆಗೆ ಇದರಲ್ಲಿ ಶಾಮೀಲಾಗಿರಬಹುದೆಂದು ಅನುಮಾನಿಸಬಹುದಾಗಿದೆ.
ಇವೆಲ್ಲವನ್ನು ಆಗ್ರಹಿಸಿ ಕೆ ಆರ್ ಎಸ್ ಪಕ್ಷವು ಮೇ 13 ರಂದು “ಅಬಲೆಯರನ್ನು ಗೌರವಿಸೋಣ ಅತ್ಯಾಚಾರಿಗೆ ತಕ್ಕ ಶಾಸ್ತಿ ಮಾಡೋಣ: ಹಾಸನ ಚಲೋ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಪ್ರತಿಭಟನೆಗೆ ರಾಜ್ಯದ ಜನರು ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡರು.

ಮುಂದಿನ ದಿನಗಳಲ್ಲಿಯೂ ಕೂಡ ಸುಳ್ಯ ತಾಲೂಕು ಸಮಿತಿಯನ್ನು ರಚಿಸಿ ಈ ಭಾಗದಲ್ಲಿ ನಡೆಯುವ ಇಲಾಖೆಗಳಿಲ್ಲಿನ ಭ್ರಷ್ಟಾಚಾರದ ವಿರುದ್ಧ ಕೆ ಆರ್ ಎಸ್ ಪಕ್ಷದ ವತಿಯಿಂದ ಧ್ವನಿ ಎತ್ತುವ ಕಾರ್ಯಗಳನ್ನು ಮಾಡಲಿದ್ದೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿತಾ ರೋಜಾರಿಯೋ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಮತಿ ಸಿಮಿ, ನೌಫಾಲ್ ಅಬ್ಬಾಸ್ ಉಪಸ್ಥಿತರಿದ್ದರು.