ಸುಳ್ಯ ಸರಕಾರಿ ಆಸ್ಪತ್ರೆಯ ಕರೆ ಆಧಾರದ ವೈದ್ಯರ ಮೇಲೆ ಆರೋಪಕ್ಕೆ ಖಂಡನೆ

0


ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಕರೆ ಆಧಾರದಲ್ಲಿ ಪ್ರಸೂತಿ ತಜ್ಞರಾಗಿ ಕೆಲಸ ಮಾಡುತ್ತಿರುವ ವೈದ್ಯರ ಮೇಲೆ ವಿನಾಕಾರಣ ಸುಳ್ಳು ಆರೋಪ ಹೊರಿಸಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಕಚೇರಿಗೆ ನುಗ್ಗಿ ಕೆ.ಆರ್.ಎಸ್ ಪಕ್ಷದವರು ದುಂಡಾವರ್ತನೆ ತೋರಿರುವುದನ್ನು ಖಂಡಿಸುತ್ತೇವೆ ಎಂದು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಮಾಜಿ ಸದಸ್ಯರು ಗಳು ಹೇಳಿಕೆ ನೀಡಿದ್ದಾರೆ.


ಈ ಕುರಿತು ಜಂಟಿ ಪ್ರಕಟಣೆಯನ್ನು ನೀಡಿರುವ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ ಮತ್ತು ರಕ್ಷಾ ಸಮಿತಿಯ ಮಾಜಿ ಸದಸ್ಯರುಗಳಾದ ಡಾ. ಮನೋಜ್ ಕುಮಾರ್, ಕೇಶವ ಮಾಸ್ಟರ್ ಹೊಸಗದ್ದೆ, ಸೋಮನಾಥ ಪೂಜಾರಿ, ಸುನಿಲ್ ಕೇರ್ಪಳ , ದಾಮೋದರ ಮಂಚಿ, ಸುಬ್ರಮಣ್ಯ ಕೊಡಿಯಾಲಬೈಲು, ಡಾ.ವಿದ್ಯಾಶಾರದ ಮತ್ತಿತರರು ಕೆ ಆರ್ ಎಸ್ ಪಕ್ಷದವರೆನ್ನಲಾದ ಕೆಲವರು ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿಗಳ ಕಚೇರಿಗೆ ನುಗ್ಗಿ ದುಂಡಾವರ್ತನೆ ತೋರಿರುವುದಲ್ಲದೆ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಪತ್ರಕರ್ತರೊಂದಿಗೆ ಮಾತನಾಡುವ ಸಮಯದಲ್ಲಿ ಸದ್ರಿ ಪ್ರಸೂತಿ ತಜ್ಞರ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿರುತ್ತಾರೆ. ಈ ಆರೋಪಗಳ ಹಿಂದೆ ಯಾವುದೋ ಕುತಂತ್ರ ಇರುವ ಸಂಶಯ ಮೇಲ್ನೋಟಕ್ಕೆ ಬಲವಾಗಿ ಕಂಡುಬರುತ್ತದೆ.


ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳು ಉನ್ನತೀಕರಣಗೊಂಡಿದ್ದು ಬಡ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತಿದೆ. ಸುಳ್ಯ ಮಾತ್ರವಲ್ಲದೆ ಆಸು ಪಾಸಿನ ತಾಲೂಕುಗಳಿಂದಲೂ ಇಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇಲ್ಲಿ ಸರಕಾರಿ ಪ್ರಸೂತಿ ವೈದ್ಯರು ಇಲ್ಲದಿರುವ ಕಾರಣದಿಂದಾಗಿ ಕಳೆದ ಕೆಲವು ವರ್ಷಗಳಿಂದ ಸ್ಥಳೀಯ ವೈದ್ಯರಾದ ಡಾ. ವೀಣಾ ಅವರು ಕರೆ ಆಧಾರದಲ್ಲಿ ಪ್ರಸೂತಿ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದು ಅತ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ತಿಂಗಳು ಒಂದರ ಸರಾಸರಿ ೪೦ರಿಂದ ೫೦ ಹೆರಿಗೆಗಳು ಆಗುತ್ತಿದ್ದು ಅನೇಕ ಬಡ ಜನರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಇಲ್ಲಿಯವರೆಗೆ ಯಾವುದೇ ರೋಗಿಗಳಾಗಲಿ ಅಥವಾ ಅವರ ಸಂಬಂಧಿಕರಾಗಲಿ ಅಥವಾ ಸಿಬ್ಬಂದಿಗಳಾಗಲಿ ಆ ವೈದ್ಯರ ಮೇಲೆ ಯಾವುದೇ ದೂರು ನೀಡಿರುವುದಿಲ್ಲ. ಆದರೆ ಕೆ ಆರ್ ಎಸ್ ಪಕ್ಷದ ಈ ಬಾರಿಯ ಲೋಕಸಭಾ ಅಭ್ಯರ್ಥಿಯವರು ಸುಳ್ಯಕ್ಕೆ ಸಂಬಂಧಪಡದ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ಅನಗತ್ಯವಾಗಿ ನುಗ್ಗಿ ದುಂಡಾವರ್ತನೆ ತೋರಿರುತ್ತಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.


ವೈದ್ಯರು ಇಂತಹವರ ವರ್ತನೆಯಿಂದ ಬೇಸತ್ತು ಕರ್ತವ್ಯಕ್ಕೆ ಹಾಜರಾಗುವುದನ್ನು ನಿಲ್ಲಿಸಿದಲ್ಲಿ ಸುಳ್ಯದ ಬಡ ಜನರು ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಾಗುತ್ತದೆ ಅಥವಾ ಮಂಗಳೂರಿನ ಲೇಡಿ ಗೊಷನ್ ಆಸ್ಪತ್ರೆಯನ್ನು ಅವಲಂಬಿಸಬೇಕಾಗುತ್ತದೆ. ಎಂದವರು ಆತಂಕ ವ್ಯಕ್ತ ಪಡಿಸಿದ್ದಾರೆ.