ಎನ್ನೆಂಸಿ; ವಾರ್ಷಿಕ ಕ್ರೀಡೋತ್ಸವಹಿರಿಯ ವಿದ್ಯಾರ್ಥಿಗಳ ಕ್ರೀಡಾ ಸಮ್ಮಿಲನ

0

ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ. ಕ್ರೀಡೆಯಿಂದ ದೈಹಿಕ ಕ್ಷಮತೆಯೊಂದಿಗೆ ನಾವು ಆರೋಗ್ಯವಾಗಿ ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ, ರಾಷ್ಟ್ರ ಮಟ್ಟದ ಕ್ರೀಡಾಪಟು, ದೈಹಿಕ ಶಿಕ್ಷಕ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವು ಬಂಟ್ವಾಳ ಇಲ್ಲಿನ ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಎಚ್. ಬಿ. ಹೇಳಿದರು.

ಇವರು ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಮೇ 22 ಮತ್ತು 23ರಂದು ನಡೆದ ಎರಡು ದಿನಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜು ಹಲವಾರು ವರ್ಷಗಳಿಂದ ಕ್ರೀಡಾ ಆಸಕ್ತರಿಗೆ ಸಾಕಷ್ಟು ಅವಕಾಶ ಕಲ್ಪಿಸಿದೆ. ಪ್ರಸ್ತುತ ಕಾಲೇಜಿನ ಕ್ರೀಡಾ ಸಾಧನೆ ಪ್ರಶಂಸನೀಯ ಎಂದ ಅವರು ಕಾಲೇಜಿನಲ್ಲಿ ಆಗಿನ ದೈಹಿಕ ನಿರ್ದೇಶಕರಾದ ಪ್ರೊ. ರಾಧಾಕೃಷ್ಣ ಮಾಣಿಬೆಟ್ಟುರವರ ಪ್ರೇರಣೆಯಿಂದ ಇವರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ನೆನಪುಗಳನ್ನು ಹಂಚಿಕೊಂಡರು.

ಪ್ರಸ್ತುತ ದಿನಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಅಧ್ಯಯನದ ಜತೆಗೆ ಕ್ರೀಡೆ, ಕೌಶಲ ಬೆಳೆಸಿಕೊಳ್ಳಬೇಕು. ಇದು ಜೀವನದಲ್ಲಿ ನಿಮಗೆ ಬೇಕಾದ ಯಶಸ್ಸನ್ನು ನೀಡುತ್ತದೆ ಎಂದರು.


ಸಭೆಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಾಲಚಂದ್ರ ಎಂ. ಇವರು ಕ್ರೀಡಾಪಟುಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿ ಕ್ರೀಡೋತ್ಸವಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ ಎಂ ಅಧ್ಯಕ್ಷತೆ ವಹಿಸಿದ ಸಭಾವೇದಿಕೆಯಲ್ಲಿ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಧಾಕೃಷ್ಣ ಮಾಣಿಬೆಟ್ಟು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ನ್ಯಾಕ್ ಸಂಯೋಜಕಿ ಡಾ. ಮಮತಾ ಕೆ ಉಪಸ್ಥಿತರಿದ್ದರು.


ವಿದ್ಯಾರ್ಥಿ ಸಂಘದ ನಾಯಕ ಜೋಸ್ಬಿನ್ ಬಾಬು ಸ್ವಾಗತಿಸಿ, ಉಪನಾಯಕಿ ನಿರೀಕ್ಷ ಅತಿಥಿಗಳನ್ನು ಪರಿಚಯಿಸಿ, ಕಾರ್ಯದರ್ಶಿ ಕೃಷ್ಣರಾಜ್ ಪ್ರಮಾಣ ವಚನ ಬೋಧಿಸಿದರು. ಕ್ರೀಡಾ ಕಾರ್ಯದರ್ಶಿ ಕು. ಕುಲಶ್ರೀ ಧನ್ಯವಾದ ಸಮರ್ಪಿಸಿದರು. ಕು. ರತ್ನಸಿಂಚನ ಮತ್ತು ಕು. ಉಜಾನ ಪ್ರಾರ್ಥಿಸಿ, ಕು. ಅನ್ವಯ ಕಾರ್ಯಕ್ರಮ ನಿರೂಪಿಸಿದರು.


ಆಕರ್ಷಕ ಪಥಸಂಚಲನ ಮತ್ತು ವಿವಿಧ ಕ್ರೀಡಾ ಸ್ಪರ್ಧೆಗಳು ದೈಹಿಕ ಶಿಕ್ಷಕರಾದ ಲೆ. ಸೀತಾರಾಮ ಎಂ. ಡಿ ಮತ್ತು ಕಾಲೇಜಿನ ಉಪನ್ಯಾಸಕ ವೃಂದದವರ ನೇತೃತ್ವದಲ್ಲಿ ನಡೆಯಿತು. ಉಪಸ್ಥಿತ ಗಣ್ಯರಿಂದ ವಿಜೇತರಿಗೆ ವಿಜಯ ವೇದಿಕೆಯಲ್ಲಿ ಪ್ರಶಸ್ತಿ ವಿತರಿಸಲಾಯಿತು.


ಕ್ರೀಡೋತ್ಸವದ ಅಂಗವಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಕೆ. ಟಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಮಧುರಾ ಎಂ ಆರ್ ಹಾಗೂ ಸಂಘದ ಪ್ರತಿನಿಧಿಗಳು ಮತ್ತು ಸದಸ್ಯರು ಭಾಗವಹಿಸಿದರು. ದೈಹಿಕ ಶಿಕ್ಷಣ ತರಬೇತುದಾರರಾದ ನಾಗರಾಜ್ ಮತ್ತು ಮಿತನ್ ಹಾಗೂ ಕಾಲೇಜಿನ ಬೋಧಕ ಬೋಧಕೇತರ ವೃಂದದವರು, ವಿದ್ಯಾರ್ಥಿ ಸಂಘದ ಎಲ್ಲಾ ಪದಾಧಿಕಾರಿಗಳು ಸಹಕರಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.