ಕುಕ್ಕೆ ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ ಬಸ್ ತಂಗುದಾಣಕ್ಕೆ ಆದಿ ಸುಬ್ರಹ್ಮಣ್ಯದಿಂದ ಮುಖ್ಯ ರಸ್ತೆಗೆ ಕೆ.ಎಸ್.ಆರ್.ಟಿ ಬಸ್ ತಂಗುದಾಣದ ಬಳಿಯಲ್ಲಿ ಹಾದು ಹೋಗುವ ರಸ್ತೆಯಿಂದ ಸಂಪರ್ಕ ಕಲ್ಪಿಸಲು ಗ್ರೀನ್ ಸಿಗ್ನಲ್ ಸಿಕ್ಕಿರುವುದಾಗಿ ವರದಿಯಾಗಿದೆ.
ಈ ರಸ್ತೆಯಿಂದ ಬಸ್ ತಂಗುದಾಣಕ್ಕೆ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಸುಬ್ರಹ್ಮಣ್ಯದ ಕಾಂಗ್ರೆಸ್ ನ ಕೆಲ ಸದಸ್ಯರು ಕೆ.ಎಸ್.ಆರ್.ಟಿ ತಂಗುದಾಣಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ಒತ್ತಾಯಿಸಿ ಪ್ರತಿಭಟಿಸುವುದಾಗಿ ಹೇಳಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ಪುತ್ತೂರಿನ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಅವರು ಇತರೇ ಇಲಾಖೆಗಳ ಅಭಿಪ್ರಾಯ ಸಂಗ್ರಹಿಸಿ ಸಂಪರ್ಕ ಕಲ್ಪಿಸಲು ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ.
ಅದರನ್ವಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕೆ.ಎಸ್.ಆರ್.ಟಿ.ಗೆ ಸಂಪರ್ಕ ಕಲ್ಪಿಸಿಕೊಳ್ಳುವಂತೆ ಪತ್ರ ರವಾನೆ ಮಾಡಿರುವುದಾಗಿ ತಿಳಿದು ಬಂದಿದೆ. ಇಲ್ಲಿ ಸಂಪರ್ಕ ಪಡೆದುಕೊಳ್ಳಲು ಕೇವಲ ಒಂದು ಗ್ರಿಲ್ಸ್ ಬೇಲಿಯಷ್ಟೆ ಅಡ್ಡ ಇರುವುದಾಗಿದೆ.