ನವದೆಹಲಿಯಲ್ಲಿ ನಡೆದ ಆಯುರ್ವೇದ ಕಾಲೇಜುಗಳ ಮೌಲ್ಯಮಾಪನ ಮತ್ತು ಮಾನ್ಯತಾ ತರಬೇತಿಯಲ್ಲಿ ಡಾ. ಪುರುಷೋತ್ತಮ ಕಟ್ಟೆಮನೆ ಭಾಗಿ

0

ದಿನಾಂಕ ಮೇ 17, 2024 ರಂದು ನವದೆಹಲಿಯ ಧನ್ವಂತರಿ ಭವನದಲ್ಲಿ “ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್” (NCISM)ನ ವಿಭಾಗವಾದ “ಮೆಡಿಕಲ್ ಅಸೆಸ್ಮೆಂಟ್ ರೇಟಿಂಗ್ ಬೋರ್ಡ್ ಫಾರ್ ಇಂಡಿಯನ್ ಸಿಸ್ಟಮ್ ಆಫ್ ಮೆಡಿಸಿನ್”(MARBISM) ಮಂಡಳಿ ಹಾಗೂ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ(QCI-NABET) ಇವರ ವತಿಯಿಂದ ಆಯೋಜಿಸಲಾದ ದೇಶಾದ್ಯಂತ ಸ್ಥಾಪಿಸಲ್ಪಟ್ಟ ಆಯುರ್ವೇದ ಕಾಲೇಜುಗಳ ಮೌಲ್ಯಮಾಪನ ಮತ್ತು ಮಾನ್ಯತೆ ಕೊಡುವ ನಿಟ್ಟಿನಲ್ಲಿ ಮೌಲ್ಯಮಾಪಕರ ತರಬೇತಿ ಕಾರ್ಯಕ್ರಮದಲ್ಲಿ ಡಾ. ಪುರುಷೋತ್ತಮ ಕೆ ಜಿ, ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು, ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗ, ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಹಾಗೂ ಮುಖ್ಯ ಕಾರ್ಯನಿರ್ವಾಹಕರು, ಕೆವಿಜಿ ಆಯುರ್ವೇದ ಔಷದ ತಯಾರಿಕ ಘಟಕ ಮತ್ತು ಸಂಶೋಧನಾ ಕೇಂದ್ರ, ಸುಳ್ಯ, ಇವರು ಭಾಗಿಯಾಗಿರುತ್ತಾರೆ.


ಈಗಾಗಲೇ ಭಾರತ ಸರ್ಕಾರದ ಅಧೀನದಲ್ಲಿ 2014ರಲ್ಲಿ ಸ್ಥಾಪನೆಗೊಂಡ ಆಯುಷ್ ಮಂತ್ರಾಲಯವು ಆಯುರ್ವೇದ ಹಾಗೂ ಇತರ ಭಾರತೀಯ ಚಿಕಿತ್ಸಾ ಪದ್ಧತಿಯ ಅತ್ಯುತ್ತಮ ಅಭಿವೃದ್ಧಿ ಮತ್ತು ಪ್ರಸರಣವನ್ನು ಖಾತ್ರಿಪಡಿಸುವ ದೃಷ್ಟಿಯೊಂದಿಗೆ ಹಲವಾರು ಯೋಜನೆಗಳನ್ನು ಆಯೋಜಿಸಿದೆ.


ಆಯುಷ್ ಮಂತ್ರಾಲಯದ ಇನ್ನೊಂದು ಮುಖ್ಯ ಉದ್ದೇಶವು ಜಾಗತಿಕವಾಗಿ ಆಯುರ್ವೇದ ಶಿಕ್ಷಣಕ್ಕೆ ಏಕರೂಪತೆ ಮತ್ತು ಪ್ರಮಾಣೀಕರಣವನ್ನು ತರುವುದು. ಅದರ ಸಲುವಾಗಿ NCISM ಆಯೋಗವನ್ನು 2021 ರಲ್ಲಿ ಜಾರಿಗೊಳಿಸಲಾಯಿತು. ಇದರ ಮುಖಾಂತರ ಉತ್ತಮ ಗುಣಮಟ್ಟದ ಆಯುರ್ವೇದ ವೈದ್ಯಕೀಯ ಶಿಕ್ಷಣ ನೀಡುವುದು, ಗುಣಮಟ್ಟದ ಆಯುರ್ವೇದ ವೈದ್ಯಕೀಯ ವೃತ್ತಿಪರರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು, ವೈದ್ಯಕೀಯ ಸಂಶೋಧನೆಯನ್ನು ಅಳವಡಿಸಿಕೊಳ್ಳುವುದು ಮತ್ತು ಸಂಶೋಧನೆಗೆ ಪ್ರೋತ್ಸಾಹಿಸುವುದು, ವೈದ್ಯಕೀಯ ಸಂಸ್ಥೆಗಳನ್ನು ನಿಯತಕಾಲಿಕವಾಗಿ ಪಾರದರ್ಶಕ ರೀತಿಯಲ್ಲಿ ವಸ್ತುನಿಷ್ಠವಾಗಿ ಮೌಲ್ಯಮಾಪನವನ್ನು ಕೈಗೊಳ್ಳುವುದು, ಆಯುರ್ವೇದ ವೈದ್ಯಕೀಯ ಸೇವೆಗಳ ಎಲ್ಲಾ ಅಂಶಗಳಲ್ಲಿ ಉನ್ನತ ನೈತಿಕ ಮಾನದಂಡಗಳನ್ನು ಜಾರಿಗೊಳಿಸುವುದು ಇದರ ಮೂಲ ಉದ್ದೇಶವಾಗಿದೆ.


MARBISM ತನ್ನ ಪೂರ್ವ ನಿರ್ಧರಿತ ಮಾನದಂಡಗಳ ಮುಖಾಂತರ ಉತ್ತಮ ಗುಣಮಟ್ಟ ಪಠ್ಯಕ್ರಮದೊಂದಿಗೆ ಅಧ್ಯಾಪಕರ ಅರ್ಹತೆಗಳು, ಮೂಲಸೌಕರ್ಯ ಮತ್ತು ಬೋಧನಾ ವಿಧಾನಗಳನ್ನು ಒಳಗೊಂಡಂತೆ ಆಯುರ್ವೇದ ಶೈಕ್ಷಣಿಕ ಸಂಸ್ಥೆಗಳ ವಿವಿಧ ಅಂಶಗಳನ್ನು ಮೌಲ್ಯಮಾಪನ ಮಾಡುತ್ತದೆ.


ಇದಲ್ಲದೆ ಡಾ. ಪುರುಷೋತ್ತಮ ಕೆ ಜಿ ಯವರು ಈಗಾಗಲೇ ಆಯುಷ್ ಮಂತ್ರಾಲಯ, ಭಾರತ ಸರ್ಕಾರದ ಅಧೀನದಲ್ಲಿ ಸ್ವಯತ್ತ ಸಂಸ್ಥೆಯಾದ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಅಡಿಯಲ್ಲಿ ಆಯುರ್ವೇದ ತರಬೇತಿ ಮಾನ್ಯತೆ ಮಂಡಳಿಯಿಂದ(ATAB) ದಿನಾಂಕ 8 ರಿಂದ 10 ಅಗಸ್ಟ್ 2023ರಲ್ಲಿ ಆಯೋಜಿಸಲಾದ ಎಟಿಎಬಿ ಮೌಲ್ಯಮಾಪಕರ ತರಬೇತಿಯಲ್ಲಿ ಭಾಗಿಯಾಗಿರುತ್ತಾರೆ. ಆಯುರ್ವೇದ ತರಬೇತಿ ಮಾನ್ಯತಾ ಮಂಡಳಿಯ (ATAB) ಪ್ರಾಥಮಿಕ ಉದ್ದೇಶವು NCISM ACT 2020 ಅಥವಾ ಯಾವುದೇ ಇತರ ನಿಯಂತ್ರಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಾರದ ಭಾರತ ಮತ್ತು ವಿದೇಶಗಳಲ್ಲಿ ನಡೆಸಲಾಗುತ್ತಿರುವ ವಿವಿಧ ಆಯುರ್ವೇದ ತರಬೇತಿ ಕೋರ್ಸ್ ಗಳಿಗೆ ಮಾನ್ಯತೆ ನೀಡುವುದಾಗಿದೆ.