ಬಳ್ಪ ಶಾಲಾ ದೈಹಿಕ ಶಿಕ್ಷಕಿ ಭಾಗೀರಥಿ ತುಕಾರಾಂರಿಗೆ ಬೀಳ್ಕೊಡುಗೆ

0

ಕ್ರೀಡೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದರ ಜೊತೆಗೆ ತಾವೇ ಸ್ವತಃ ರಾಷ್ಟ್ರೀಯ ಕ್ರೀಡಾಪಟುವಾಗಿ ಮಿಂಚಿದವರು.

ತಮ್ಮ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಅದನ್ನು ವೃತ್ತಿ ಕ್ಷೇತ್ರದಲ್ಲಿ ತೋರಿಸದೆ ನಗುವಿನ ಲೇಪನದೊಂದಿಗೆ ಎಲ್ಲರೊಂದಿಗೆ ಬೆರೆತವರು, ವೃತ್ತಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾದವರು ಭಾಗೀರಥಿ ತುಕಾರಾಂರು.

36 ವರ್ಷಗಳ ಕಾಲ ಒಂದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ಇಷ್ಟೊಂದು ಅಭಿಮಾನಿಗಳು ಸೇರಿದ್ದಾರೆ. ಇವರನ್ನು ಶಿಕ್ಷಕಿಯಾಗಿ ಪಡೆದಿರುವುದ ಈ ಭಾಗದ ವಿದ್ಯಾರ್ಥಿಗಳಿಗೆ ಲಭಿಸಿರುವುದು ಈ ಭಾಗದ ಜನರ ಪುಣ್ಯ. ದೈಹಿಕ ಶಿಕ್ಷಣದೊಂದಿಗೆ ಗಣಿತ, ಹಿಂದಿ ಶಿಕ್ಷಕಿಯಾಗಿಯೂ ದುಡಿದಿರುವುದು ಇವರ ಹೆಚ್ಚುಗಾರಿಕೆ.

ನಿವೃತ್ತಿ ಎಂದರೆ ನಿನ್ನೆಯ ನೆನಪು ನಾಳೆಯ ಕನಸು ಎಂದು ಅರಂತೋಡು ಎನ್.ಎಂ.ಸಿ. ನಿವೃತ್ತ ಪ್ರಾಂಶುಪಾಲರಾದ ಕೆ.ಆರ್. ಗಂಗಾಧರ್ ಹೇಳಿದರು. ಅವರು ಜೂ. 8ರಂದು ಬಳ್ಪ ಸ.ಉ.ಹಿ.ಪ್ರಾ. ಶಾಲೆ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಬಳ್ಪ ಉ.ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಕಿ ಶ್ರೀಮತಿ ಭಾಗೀರಥಿ ತುಕಾರಾಂ ರವರಿಗೆ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನಾ ಮಾತುಗಳನ್ನಾಡಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯರವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಕೃಷ್ಣ ಭಟ್ ಶ್ರೀಮತಿ ಭಾಗೀರಥಿಯವರನ್ನು ಸನ್ಮಾನಿಸಿದರು. ಬಳ್ಪ ಗ್ರಾ.ಪಂ. ಅಧ್ಯಕ್ಷ ಹರ್ಷಿತ್ ಕಾರ್ಜ, ಸದಸ್ಯೆ ಶ್ರೀಮತಿ ನೇತ್ರಾವತಿ ಹೊಪ್ಪಾಳೆ, ಸುಬ್ರಹ್ಮಣ್ಯ ಕ್ಲಷ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಸುಬ್ರಹ್ಮಣ್ಯ ಕೆ.ಎನ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಸುಮಾಧರ ಕೋಡಿಬೈಲು, ಬಳ್ಪ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ, ಪಂಜ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುಬ್ರಹ್ಮಣ್ಯ ಕುಳ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ್ ಸ್ವಾಗತಿಸಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಶ್ರೀಮತಿ ಭವ್ಯ ಕೆ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಜನೀಶ್ ಕೆ ಸನ್ಮಾನಪತ್ರ ವಾಚಿಸಿದರು. ಶಾಲಾ ಶಿಕ್ಷಕ ಆನಂದ ವೈ.ಇ. ಕೆ.ಆರ್.ಜಿ.ಯವರನ್ನು ಪರಿಚಯಿಸಿದರು. ಶ್ರೀ ಪರಿವಾರ ಪಂಚಲಿಂಗೇಶ್ವರ ತರಬೇತಿ ವಿದ್ಯಾಸಂಸ್ಥೆಯ ಉಪನ್ಯಾಸಕ ಪ್ರಸನ್ನ ವೈ.ಟಿ ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಪೂಜಾರಿ ಬುಡೆಂಗಿ, ಅಭಿಲಾಷ್ ಕಟ್ಟ, ಗೋಪಾಲ ಎಣ್ಣೆಮಜಲು, ಸುರೇಶ್ ಕುಮಾರ್ ನಡ್ಕ ಮತ್ತು ಶ್ರೀಲತಾ ಸಭಿಕರ ಪರವಾಗಿ ಶುಭಾಶಯ ಹೇಳಿದರು. ಶಾಲಾ ವತಿಯಿಂದ, ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮತ್ತು ಭಾಗೀರಥಿ ತುಕಾರಾಂರವರ ಅಭಿಮಾನಿಗಳ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.

ಈಗಿನ ಶಿಕ್ಷಣ ವ್ಯವಸ್ಥೆ ತುಂಬಾ ಬದಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕೆಲಸಕ್ಕಿಂತ ಇಲಾಖೆಗೆ ವಿವಿಧ ದಾಖಲೆಗಳನ್ನು ತಯಾರಿಸಿ ಕೊಡುವುದೇ ಶಿಕ್ಷಕರಿಗೆ ದೊಡ್ಡ ಕೆಲಸವಾಗಿದೆ. ಇದರ ಜೊತೆಯಲ್ಲಿ ವಾರಕ್ಕೆರಡು ಮೀಟಿಂಗ್. ಹೀಗಿರುವಾಗ ಇರುವ ಒಂದೆರಡು ಶಿಕ್ಷಕರು ಹೇಗೆ ನಿಗದಿತ ಸಮಯದಲ್ಲಿ ಪಾಠ ಮುಗಿಸಿಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ – ಕೆ.ಆರ್.ಜಿ

  • * ಬೀಳ್ಕೊಡುವ ಶಿಕ್ಷಕಿ ಭಾಗೀರಥಿಯವರನ್ನು ‌ಮತ್ತು ಅತಿಥಿಗಳನ್ನು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.
  • * ಸಿಂಗಾರಿ ಮೇಳ, ಶಾಲಾ ಬ್ಯಾಂಡ್ ಸೆಟ್ ಮೂಲಕ ಸ್ವಾಗತಿಸಲಾಯಿತು. ಸಿಡಿಮದ್ದಿನ ಸದ್ದು, ಧ್ವನಿವರ್ಧಕದ ಸಂಗೀತ ಮೆರವಣಿಗೆ ಮೆರಗು ನೀಡಿತ್ತು.
  • * ದೀಪ ಪ್ರಜ್ವಲನೆಯ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
  • * ನಿವೃತ್ತ ಶಿಕ್ಷಕಿ ಭಾಗೀರಥಿ ತುಕಾರಾಂರು ತಮ್ಮ ವೃತ್ತಿ ಜೀವನದಲ್ಲಿ ಸಹಕಾರ ನೀಡಿದ ಹಲವು ಮಂದಿಗೆ ಸ್ಮರಣಿಕೆಗಳನ್ನು ನೀಡಿದರು.
  • * ಶಾಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕಾಗಿ ರೂ. 25,000 ಮತ್ತು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ರೂ. 75,000 ಕೊಡುಗೆಯನ್ನು ಶ್ರೀಮತಿ ಭಾಗೀರಥಿ ತುಕಾರಾಂರವರು ಎಸ್.ಡಿ.ಎಂ.ಸಿ. ಅಧ್ಯಕ್ಷರಿಗೆ ಹಸ್ತಾಂತರಿಸಿದರು.