ತಾಂತ್ರಿಕ ಸಮಸ್ಯೆಯೇ ? ಕಿಡಿಗೇಡಿಗಳ ಕೃತ್ಯವೇ ?
ಸುದ್ದಿ ಆನ್‌ಲೈನ್ ನ್ಯೂಸ್ ಮೂಲಕ ಅಪ್ಲೋಡ್ ಆದ ಸುದ್ದಿಯೊಂದಕ್ಕೆ ಸಂಬಂಧವೇ ಪಡದ ಬೇರೆ ಯಾವ್ಯಾವುದೋ ಫೊಟೋಗಳು ಲಿಂಕ್ ಆಗಿ ಬರುತ್ತಿದ್ದು, ಓದುಗರಿಗೆ ತಪ್ಪು ಸಂದೇಶ ಹೋಗುವಂತಾಗಿದೆ.
ಕಾಂತಮಂಗಲ ಶಾಲಾ ಜಗುಲಿಯಲ್ಲಿ ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪ್ರಕರಣದ ಪ್ರಥಮ ವರದಿ ಸುದ್ದಿ ಆನ್ಲೈನ್ ನ್ಯೂಸ್‌ನಲ್ಲಿ ಜೂ. ೧೭ರಂದು ಬೆಳಿಗ್ಗೆ ಪ್ರಕಟಿಸಲಾಗಿತ್ತು. ಈ ವರದಿಗೆ ಕಾಂತಮಂಗಲ ಶಾಲಾ ಆವರಣದ ಫೊಟೋ ಹಾಕಲಾಗಿತ್ತು. ಈ ಸುದ್ದಿಗೆ ಸಂಜೆಯ ವೇಳೆಗೆ ಸುಳ್ಯದ ಬಾಲಕನೊಬ್ಬ ಹಾಡುತ್ತಿರುವ ಫೊಟೋ ಲಿಂಕ್ ಆಗಿ, ಶಾಲೆಯ ಫೊಟೋದ ಜಾಗದಲ್ಲಿ ಈ ಬಾಲಕನ ಫೊಟೋ ಕಾಣುತ್ತಿತ್ತು. ಇದು ಎಲ್ಲಾ ಮೊಬೈಲ್‌ಗಳಲ್ಲಿ ಹೀಗೆ ಕಾಣುತ್ತಿಲ್ಲ. ಕೆಲವು ಮೊಬೈಲ್‌ಗಳಲ್ಲಿ ಮಾತ್ರ ಹೀಗೆ ಕಾಣುತ್ತಿದೆ. ಇದನ್ನು ಕಂಡು ಕೆಲವು ವೀಕ್ಷಕರು ಅಚ್ಚರಿಗೊಳಗಾಗಿ ಸುದ್ದಿ ಕಚೇರಿಗೆ ಮತ್ತು ಆ ಬಾಲಕನ ಮನೆಯವರಿಗೆ ವಿಷಯ ತಿಳಿಸಿದರು.
ಯಾರೋ ಕಿಡಿಗೇಡಿಗಳು ಈ ರೀತಿ ಫೊಟೋ ಲಿಂಕ್ ಹಾಕಿರಬೇಕೆಂದು ತಿಳಿದು ಪೊಲೀಸ್ ಕಂಪ್ಲೇಂಟ್ ಕೊಡಲು ತೀರ್ಮಾನಿಸಲಾಯಿತು. ಆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಪುತ್ತೂರಿನ ಸುದ್ದಿ ವೆಬ್‌ಸೈಟ್ ಮುಖ್ಯಸ್ಥರನ್ನು ಸಂಪರ್ಕಿಸಿದಾಗ, ಕೆಲವು ಫೋನ್‌ಗಳಲ್ಲಿ ಯಾವುದೋ ನ್ಯೂಸ್‌ಗೆ ಬೇರೆ ಯಾವುದೋ ಫೊಟೋ ಲಿಂಕ್ ಆಗಿ ಬರುತ್ತಿರುವ ಬಗ್ಗೆ ತಿಳಿಸಿದರು.
ತಾಂತ್ರಿಕ ತೊಂದರೆಯಿಂದ ಅಥವಾ ಕಿಡಿಗೇಡಿಗಳ ಕೃತ್ಯದಿಂದ ಈ ರೀತಿ ಬೇರೆ ಫೊಟೋ ಲಿಂಕ್ ಆಗುವ ಸಾಧ್ಯತೆ ಇದ್ದು, ಓದುಗರು ಈ ರೀತಿಯ ಬೆಳವಣಿಗೆಯ ಬಗ್ಗೆ ತಿಳಿದಿರಬೇಕೆಂದು ವಿನಂತಿಸುತ್ತಿದ್ದೇವೆ.
-ಸುದ್ದಿ ಬಳಗ ಸುಳ್ಯ