ನಾವೂರು,ಜಟ್ಟಿಪಳ್ಳ, ಬೋರುಗುಡ್ಡೆ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

0

ಕಳೆದ ಐದಾರು ದಿನಗಳಿಂದ ಸುಳ್ಯದ ನಾವೂರು, ಬೋರುಗುಡ್ಡೆ, ಜಟ್ಟಿಪಳ್ಳದ ಹಲವಾರು ಮನೆಗಳಿಗೆ ಪಂಚಾಯತ್ ನ ಕುಡಿಯುವ ನೀರು ಸರಬರಾಜು ಆಗದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ಭಾಗದ ಮನೆಗಳಿಗೆ ಕಲ್ಲುಮುಟ್ಲು ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜಾಗುತ್ತಿದ್ದು ಕಳೆದ ಕೆಲವು ದಿನಗಳಿಂದ ಸಮರ್ಪಕವಾಗಿ ನೀರು ಬಾರದೆ ಜನರು ಸಂಕಷ್ಟದಲ್ಲಿದ್ದಾರೆ.

ಈ ಬಗ್ಗೆ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದ ಸ್ಥಳೀಯ ನಗರ ಪಂಚಾಯತ್ ಸದಸ್ಯರುಗಳಾದ ಕೆಎಸ್ ಉಮ್ಮರ್ ಹಾಗೂ ಶರೀಫ್ ಕಂಠಿ ನಗರ ಪಂಚಾಯತ್ ಸಿಬ್ಬಂದಿಗಳ ಸಹಕಾರದಿಂದ ಕಳೆದ ಐದಾರು ದಿನಗಳಿಂದ ಅಲ್ಲಲ್ಲಿ ನೀರಿನ ಪೈಪುಗಳು ಹಾದು ಹೋಗುವ ಸ್ಥಳವನ್ನು ಅಗೆದು ಸಮಸ್ಯೆಯನ್ನು ಹುಡುಕಲು ಪರಿಶ್ರಮ ಪಡುತ್ತಿದ್ದಾರೆ.

ಆದರೆ ಇದುವರೆಗೂ ನೀರು ಬಾರದೆ ಇರಲು ಕಾರಣದ ಬಗ್ಗೆ ಫಾಲ್ಟ್ ಕಂಡು ಹುಡುಕಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಗೆ ಮಾಹಿತಿ ನೀಡಿದ ಕೆ ಎಸ್ ಉಮ್ಮರ್ ಕಲ್ಲುಮುಟ್ಲುವಿನಿಂದ ಸರಬರಾಜಾಗುತ್ತಿರುವ ನೀರು ಅಲ್ಲಿಂದ ಸಮರ್ಪಕವಾಗಿ ಬರುತ್ತಿದ್ದು ನೀರಿನ ಫ್ರೆಶರ್ ಕಡಿಮೆ ಇರುವ ಕಾರಣ ಮನೆಗಳ ಟ್ಯಾಂಕಿಗಳಿಗೆ ತಲುಪುತ್ತಿಲ್ಲ. ಈ ಬಗ್ಗೆ ನಗರದ ವಿವಿಧ ಭಾಗಗಳಲ್ಲಿ ಪಂಚಾಯತ್ ಸಿಬ್ಬಂದಿಗಳ ಸಹಕಾರದಿಂದ ಸಮಸ್ಯೆಯನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ.

ಆದಷ್ಟು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.ಅಲ್ಲದೆ ಪಂಚಾಯಿತ್ ಕಚೇರಿಯಲ್ಲಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಅಥವಾ ತಾಂತ್ರಿಕ ಸಮಸ್ಯೆಯನ್ನು ಅರಿಯಬಲ್ಲ ವ್ಯಕ್ತಿಗಳು ಇಲ್ಲದೆ ಇರುವುದು ಇದಕ್ಕೆಲ್ಲ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತೊಬ್ಬ ಸದಸ್ಯ ಶರೀಫ್ ಕಂಠಿ ಕೂಡ ಮಾತನಾಡಿ ಕಳೆದ 6 ದಿನಗಳಿಂದ ನಮ್ಮ ವಾರ್ಡಿಗೆ ನೀರೇ ಬರುತ್ತಿಲ್ಲ.

ನನ್ನ ಮನೆಗೂ ನೀರಿನ ಸಮಸ್ಯೆ ಆಗಿದೆ. ಅಲ್ಲದೆ ವಾರ್ಡ್ ನಿವಾಸಿಗಳು ಸಂಕಷ್ಟಪಡುತ್ತಿದ್ದಾರೆ. ಈ ಬಗ್ಗೆ ನೋಡುವ ಅಧಿಕಾರಿಗಳು ನಮ್ಮಲ್ಲಿ ಇಲ್ಲ.

ಯಾರಲ್ಲಿ ಹೇಳುವುದು ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ರಾತ್ರಿ ಹಗಲು ಎನ್ನದೆ ಇದರ ಹಿಂದೆ ಓಡಾಡುತ್ತಿದ್ದೇವೆ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ. ಆದರೂ ಆದಷ್ಟು ಶೀಘ್ರದಲ್ಲಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.