ಮರ್ಕಂಜದ ಅಳವುಪಾರೆ ಗಣಿಗಾರಿಕೆಯ ಬಗ್ಗೆ ಗ್ರಾಮಸಭೆಯಲ್ಲಿ ಭಾರೀ ಚರ್ಚೆ

0

ಮರ್ಕಂಜ ಗಣಿಗಾರಿಕೆ ನಿಲ್ಲಿಸುವಂತೆ ಮತ್ತು ಗಣಿಗಾರಿಕೆ ಮಾಡಲು ಬೇಕಾದ ದಾಖಲೆಗಳನ್ನು ಸರಿಯಾಗಿ ನೀಡದೇ ಗಣಿಗಾರಿಕೆ ಮತ್ತೆ ಆರಂಭವಾದ ಬಗ್ಗೆ ಭಾರೀ ಚರ್ಚೆಗೆ ಗ್ರಾಸವಾದ ಹಾಗೂ ಗ್ರಾಮಸ್ಥರು ಆಡಳಿತದ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮರ್ಕಂಜ ಗ್ರಾಮಸಭೆಯಿಂದ ವರದಿಯಾಗಿದೆ.

ಗಣಿಗಾರಿಕೆ ಮತ್ತೆ ಆರಂಭವಾದ ಬಗ್ಗೆ ಮಾತನಾಡಿದ ನವೀನ್ ರವರು ಮರ್ಕಂಜದ ಗಣಿಗಾರಿಕೆ ಅವರಿಗೆ ಇದ್ದ ಅನುಮತಿಯಿಂದ ಹೆಚ್ಚುವರಿಯಾಗಿ ವಿಸ್ತರಿಸಿ ಬೇರೆ ಸರ್ವೆ ನಂಬರ್ ನಲ್ಲಿ ತೆಗೆಯುತ್ತಿದ್ದೀರಾ? ಎಂದು ಪ್ರಶ್ನಿಸಿದಾಗ ಪಂಚಾಯತ್ ಅಭಿವೃದ್ಧಿಯವರು ಹೆಚ್ಚುವರಿ ತೆಗೆದಿದ್ದಕ್ಕೆ ಒಮ್ಮೆ ದಂಡ ವಿಧಿಸಿದ್ದಾರೆ ಎಂದರು. ಆಗ ಚರಣ್ ರವರು ಮಾತನಾಡಿ ದಂಡ ಕಟ್ಟಿದರೆ ಕೋರೆ ಅನುಮತಿ ಇಲ್ಲದ ಸ್ಥಳದಲ್ಲಿ ಮುಂದುವರೆಸಬಹುದಾ? ಎಂದು ಪ್ರಶ್ನಿಸಿದರು.


ಇದೇ ವಿಚಾರವಾಗಿ ತೀವ್ರ ಚರ್ಚೆ ನಡೆಯಿತು. ಚರಣ್ ಮತ್ತು ನವೀನ್ ರವರ ಮಾತಿಗೆ ಧ್ವನಿಗೂಡಿಸಿದ ಚೇತನ್ ಸುರೇಶ್, ವೆಂಕಟ್ರಮಣ ಮತ್ತಿತರರು ಇಲ್ಲಿಗೆ ತಹಶಿಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಬರಬೇಕು. ಗಣಿಗಾರಿಕೆ ಮಾಡಲು ಸುಳ್ಳು ದಾಖಲೆ ಕೊಡಲಾಗಿದೆ. ಗಣಿಗಾರಿಕೆಯಿಂದಾಗಿ ನೀರಿದ್ದ ಬೋರ್ ವೆಲ್ ಖಾಲಿಯಾಗಿದೆ. ರಸ್ತೆಗಳು ಹಾಳಾಗಿದೆ. ನೆರೆಹಿರೆಯ ಮನೆಗಳ ಗೋಡೆಗಳು ಬಿರುಕು ಬಿಟ್ಟಿದೆ. ನೀವು ಯಾರು ಸದಸ್ಯರು ಮಾತನಾಡುತ್ತಿಲ್ಲ ಯಾಕೆ? ಸಮಸ್ಯೆ ಹೇಳಲು ಸ್ಥಳಕ್ಕೆ ಬರಲು ಹೇಳಿದರೂ ಬರುವುದಿಲ್ಲ‌. ಪಿಡಿಓ ರವರು ಬರುತ್ತಿಲ್ಲ ಎಂದು ಕಿಡಿ ಕಾರಿದರು. ಆಗ ನೋಡೆಲ್ ಅಧಿಕಾರಿಯವರು ಮಧ್ಯೆ ಪ್ರವೇಶಿಸಿ ಈಗ ಇಲಾಖಾಧಿಕಾರಿಗಳು ಮಾಹಿತಿ ನೀಡುತ್ತಾರೆ. ಮತ್ತೆ ಈ ಬಗ್ಗೆ ಮಾತನಾಡಲು ಅವಕಾಶವಿದೆ ಎಂದಾಗ ನಮಗೆ ನಮ್ಮ ಗ್ರಾಮ ಮೊದಲು. ನಮ್ಮ ಸಮಸ್ಯೆಯನ್ನು ಮೊದಲು ಆಲಿಸಿ. ಮತ್ತೆ ಇಲಾಖೆಯವರು ಮಾಹಿತಿ ನೀಡಲಿ ಎಂದು ಪಟ್ಟು ಹಿಡಿದರು. ಆಗ ನೋಡೆಲ್ ಅಧಿಕಾರಿಯವರು ಈ ಬಗ್ಗೆ ಮನವಿ ಕೊಡಿ ನಾವು ಸಂಬಂಧಪಟ್ಟ ಇಲಾಖೆಗೆ ಮನವಿ ತಲುಪಿಸುತ್ತೇವೆ ಎಂದಾಗ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ನಾವು ಸಾಕಷ್ಟು ಬಾರಿ ಮನವಿ ನೀಡಿದ್ದೇವೆ. ಮನವಿ ನೀಡಿ ನೀಡಿ ಸಾಕಾಗಿದೆ.ಅಲ್ಲಿ ಶಾಲೆಗೆ 300 ಮೀ.ದೂರ ಇದೆ. ಆದರೆ 1 ಕಿ.ಮೀ. ಅಂತ ದಾಖಲೆಗೆ ನೀಡಿದ್ದಾರೆ ಇದು ಸರಿಯಾ? ಎಂದು ತೀವ್ರವಾಗಿ ಆಡಳಿತ ವನ್ನು ತರಾಟೆಗೆ ತೆಗೆದುಕೊಂಡರು. ಅಂತಿಮವಾಗಿ ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಗ್ರಾಮಸಭೆ ನಿರ್ಣಯ ಕೈಗೊಂಡು ಆ ನಿರ್ಣಯದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.‌

ಮರ್ಕಂಜ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಇಂದು ಶ್ರೀ ವಿನಾಯಕ ಸಭಾಭವನ ರೆಂಜಾಳದಲ್ಲಿ ಪಂಚಾಯತ್ ಅಧ್ಯಕ್ಷೆ ಗೀತಾ ಎಚ್.ಎಂ.ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರೀಮತಿ ಶೈಲಜ ನೋಡೆಲ್ ಅಧಿಕಾರಿಯಾಗಿದ್ದರು.

ಕಾರ್ಯದರ್ಶಿ ಪದ್ಮಾವತಿ ವರದಿ ಮಂಡಿಸಿದರು.

ಪಿಡಿಒ ವಿದ್ಯಾಧರ ಕೆ.ಎಸ್. ಸ್ವಾಗತಿಸಿ, ನಿರೂಪಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರುಗಳಾದ ಚಿತ್ತರಂಜನ್ ಕಟ್ಟಕ್ಕೋಡಿ, ರಮತಾ ಕುದ್ಕುಳಿ, ಯಶವಂತ ಸೂಟೆಗದ್ದೆ, ರಾಜೇಂದ್ರ ಕೊಚ್ಚಿ, ಗೋವಿಂದ ಅಳವುಪಾರೆ, ನಾಗವೇಣಿ ಶೆಟ್ಟಿಮಜಲು, ಪವಿತ್ರ ಗುಂಡಿ ಉಪಸ್ಥಿತರಿದ್ದರು.

ದೊಡ್ಡತೋಟ ಮರ್ಕಂಜ ರಸ್ತೆ ದುರಸ್ಥಿಯ ಬಗ್ಗೆ ಮತ್ತು ಚರಂಡಿ ದುರಸ್ಥಿ ಹಾಗೂ ರಸ್ತೆ ಬದಿ ಕಾಡು ಕಡಿಯುವ ಬಗ್ಗೆ ಸತೀಶ್ ರಾವ್ ದಾಸರಬೈಲು ಹೇಳಿದರು. ಈ ಬಗ್ಗೆ ಪಿಡಬ್ಲ್ಯುಡಿ ಇಲಾಖೆಗೆ ಕಳುಹಿಸಿಕೊಡುವ ಬಗ್ಗೆ ಪಿಡಿಒ ಹೇಳಿದರು ‌.

ಗ್ರಾಮಸಭೆಯಲ್ಲಿ ರಸ್ತೆ ಸಮಸ್ಯೆ, ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚೆಯಾಯಿತು.