ಕೆಲಸಕ್ಕೆ ಹಾಜರಾಗದೇ ಪಂಪು ಚಾಲಕರಿಂದ ಪ್ರತಿಭಟನೆ
ಪಂಚಾಯತ್ ನೀರು ಬಳಕೆದಾರರು ಬಿಲ್ ಪಾವತಿಸಲು ಆಡಳಿತ ಮಂಡಳಿ ಮನವಿ
ಅಜ್ಜಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವರ 18 ಮಂದಿ ಪಂಪು ಚಾಲಕರಿಗೆ ಎರಡು ತಿಂಗಳ ಸಂಬಳ ಆಗಿಲ್ಲವೆಂಬ ಕಾರಣಕ್ಕೆ ಪಂಪು ಚಾಲಕರು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಪಂಪು ಚಾಲಕರಿಗೆ ಪಂಚಾಯತ್ ಎರಡು ತಿಂಗಳಿಂದ ವೇತನ ನೀಡಿಲ್ಲ. ಈ ಕುರಿತು ವಾರದ ಹಿಂದೆ ಪಂಪುಚಾಲಕರಾದ ಪರಮೇಶ್ವರ ಬಸವನಪಾದೆ, ಸುಂದರ ದೊಡ್ಡೇರಿ, ಸುಂದರ, ಕೃಷ್ಣ ಮೊದಲಾದವರು ಪಂಚಾಯತ್ ಗೆ ಮನವಿ ಮಾಡಿ ವೇತನ ನೀಡುವಂತೆ ಕೇಳಿಕೊಂಡರೆನ್ನಲಾಗಿದೆ. ಆದರೆ ಜು.5 ತಾರಿಕೀನವರೆಗೂ ವೇತನ ಸಿಗದಿದ್ದುದರಿಂದ ಪಂಪು ಚಾಲಕರು ಜು.6 ರಿಂದ ನೀರು ಬಿಡುವುದನ್ನು ನಿಲ್ಲಿಸಿದರೆನ್ನಲಾಗಿದೆ.
ಪಂಚಾಯತ್ ನೀರು ಬಳಕೆ ಮಾಡುವವರು ಕಡ್ಡಾಯವಾಗಿ ಪಂಚಾಯತ್ ಗೆ ಬಿಲ್ ಪಾವತಿಸುವಂತೆ ಪಂಚಾಯತ್ ಆಡಳಿತ ಮಂಡಳಿ ವಿನಂತಿಸಿದ್ದಾರೆ. ಅಲ್ಲದೆ ಇಂದು ಆದಿತ್ಯವಾರವಾಗಿದ್ದರೂ ಪಂಚಾಯತ್ ಪಿಡಿಒ, ಸಿಬ್ಬಂದಿಗಳು ಅಜ್ಜಾವರ ವ್ಯಾಪ್ತಿಯಲ್ಲಿ ನೀರಿನ ಬಿಲ್ ಸಂಗ್ರಹಣೆಯಲ್ಲಿ ಫೀಲ್ಡ್ ವರ್ಕ್ ಮಾಡುತ್ತಿರುವುದಾಗಿಯೂ ತಿಳಿದುಬಂದಿದೆ.
ಈ ಕುರಿತು ಪಂಪು ಚಾಲಕ ಪರಮೇಶ್ವರ ಬಸವನಪಾದೆಯವರನ್ನು ಸಂಪರ್ಕಿಸಿದಾಗ, “ನಮಗೆ ಎರಡು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ. ಅದೇ ಸಂಬಳದಲ್ಲಿ ಜೀವನ ಸಾಗಬೇಕು. ಸಂಬಳ ಕೊಟ್ಟ ಮರುದಿನವೇ ಕೆಲಸ ಮಾಡುತ್ತೇವೆ. ಅಲ್ಲಿವರೆಗೆ ನಮ್ಮ ಪ್ರತಿಭಟನೆ ಇರುತ್ತದೆ” ಎಂದು ಹೇಳಿದರು.
“ಪಂಪು ಚಾಲಕರಿಗೆ ಪಂಚಾಯತ್ ನ ನೀರಿನ ಅಕೌಂಟ್ ನಿಂದ ಸಂಬಳ ಕೊಡುವುದು. ಆದರೆ ಆ ಅಕೌಂಟಲ್ಲಿ ದುಡ್ಡಿಲ್ಲ. ನನ್ನ ವಾರ್ಡ್ ನಲ್ಲಿ 3 ಲಕ್ಷದ 40 ಸಾವಿರ ಕಲೆಕ್ಷನ್ ಬಾಕಿ ಇದೆ. ಜನರು ತಾವು ಬಳಕೆ ಮಾಡಿದ ನೀರಿನ ಮೊತ್ತ ಪಂಚಾಯತ್ ಗೆ ಪಾವತಿ ಮಾಡಿದರೆ ಈ ರೀತಿಯ ಸಮಸ್ಯೆ ಬರುವುದಿಲ್ಲ. ಎಲ್ಲರೂ ನೀರಿನ ಬಿಲ್ ಪಾವತಿಸಬೇಕು ಎಂದು ಪಂಚಾಯತ್ ಉಪಾಧ್ಯಕ್ಷ ಜಯರಾಮ ಅತ್ಯಡ್ಕ ತಿಳಿಸಿದ್ದಾರೆ.
ಪಂಚಾಯತ್ ಪಿಡಿಒ ರವರು ಪ್ರತಿಕ್ರಿಯಿಸಿ ನೀರಿನ ಬಿಲ್ ಪಾವತಿಗೆ ತುಂಬಾ ಬಾಕಿ ಇದೆ. ಅದು ಪಂಚಾಯತ್ ಗೆ ಬಂದರೆ ಸಂಬಳ ನೀಡಬಹುದು. ಇಂದು ಆದಿತ್ಯವಾರ ಅಜ್ಜಾವರದಲ್ಲಿ ನಾವು ಮನೆ ಮನೆಗೆ ನೀರಿನ ಬಿಲ್ ಕಲೆಕ್ಷನ್ ಮಾಡುತಿದ್ದೇವೆ” ಎಂದು ತಿಳಿಸಿದ್ದಾರೆ.