ಕಾಂತಮಂಗಲ ಸೇತುವೆ ಬಳಿ ಕಸ ಎಸೆದ ಎರಡು ಹೋಟೆಲ್ ನವರಿಗೆ ದಂಡ ಹಾಕಿದ ಅಜ್ಜಾವರ ಗ್ರಾ.ಪಂ.

0

ಸುಳ್ಯ‌ ನಗರದ ಎರಡು ಹೋಟೆಲ್ ನವರು ತ್ಯಾಜ್ಯಗಳನ್ನು ಕಾಂತಮಂಗಲ ಸೇತುವೆ ಬಳಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಅಜ್ಜಾವರ ಗ್ರಾಮ ಪಂಚಾಯತ್ ದಂಡ ವಿಧಿಸಿದ ಘಟನೆ ವರದಿಯಾಗಿದೆ.

ಪ್ರಕರಣ -1

ಸುಳ್ಯ ಕುರುಂಜಿಭಾಗ್ ನ ಹೋಟೆಲ್‌ ಒಂದರ ಕೆಲಸದವರು ಕೋಳಿ ತ್ಯಾಜ್ಯವನ್ನು ಸ್ಕೂಟರ್ ನಲ್ಲಿ ಇಟ್ಟು ಜೂ.24ರಂದು ರಾತ್ರಿ ವೇಳೆ ಕಾಂತಮಂಗಲ ಸೇತುವೆ ಬಳಿ ಎಸೆಯಲು ಬಂದರು.

ಅವರು ಸ್ಕೂಟಿಯಿಂದ ಕಸ ಎಸೆಯಲು ಮುಂದಾದಾಗ ಕಾರೊಂದು ಬಂತೆಂದೂ ಈ ವೇಳೆ ಸ್ಕೂಟಿಯವರು ಸ್ಕೂಟಿಯಲ್ಲಿ ಮುಂದಕ್ಕೆ ಚಲಾಯಿಸಿ ಕಾಂತಮಂಗಲ ಜಂಕ್ಷನ್ ಗೆ ಹೋಗಿ, ವಾಪಸ್ ಕಾಂತಮಂಗಲ ಸೇತುವೆ ಬಳಿ ಬಂದು ಮತ್ತೆ ತ್ಯಾಜ್ಯ ಎಸೆಯಲೆತ್ನಿಸಿದರು.‌ ಸ್ಕೂಟಿಯವರ ಚಲನವಲನ ನೋಡಿದ ಸ್ಥಳೀಯರು ಅವರನ್ನು ತಡೆದು ವಿಚಾರಿಸಿ, ಸ್ಕೂಟಿಯಲ್ಲಿ ತ್ಯಾಜ್ಯ ಇರುವುದು ದೃಢಿಸಿಕೊಂಡು ಪಂಚಾಯತ್ ಗೆ ತಿಳಿಸಿದರೆನ್ನಲಾಗಿದೆ.

ಬಳಿಕ ಸ್ಕೂಟಿಯವರು ತ್ಯಾಜ್ಯದೊಂದಿಗೆ ವಾಪಾಸ್ಸಾದರು. ಈ ವಿಷಯವನ್ನು ಪಂಚಾಯತ್ ನವರು ಸುಳ್ಯ ಪೋಲೀಸ್ ಠಾಣೆಗೂ ಮಾಹಿತಿ ನೀಡಿದರು. ಪ್ರಕ್ರಿಯೆ ನಡೆದು ಬಳಿಕ ಜು.5ರಂದು ವಿವೇಕಾ ಎಂಬವರು ಪಂಚಾಯತ್ ಗೆ ರೂ.10 ಸಾವಿರ ದಂಡ ಪಾವತಿಸಿದರೆಂದು ತಿಳಿದುಬಂದಿದೆ.

ಪ್ರಕರಣ – 2

ಹಳೆಗೇಟಿನ ಹೋಟೆಲ್ ಒಂದರ ಕೆಲಸದವರು ಹೋಟೆಲ್ ತ್ಯಾಜ್ಯವನ್ನು ಕಾಂತಮಂಗಲ ಸೇತುವೆಯ ಬಳಿ ಎಸೆದಿದ್ದರು.‌ ಕಸದ ರಾಶಿಯ ಕುರಿತು ಪಂಚಾಯತ್ ಗೆ ವಿಷಯ ತಿಳಿದು, ಪಂಚಾಯತ್ ವತಿಯಿಂದ ಕಸವನ್ನು ಪರಿಶೀಲಿಸಿದಾಗ ಅದರಲ್ಲಿ ಹಳೆಗೇಟಿನ ಹೋಟೆಲ್ ಒಂದರ ಬಿಲ್ ಬುಕ್ ದೊರೆಯಿತು. ಅವರನ್ನು ಕರೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡರೆನ್ನಲಾಗಿದೆ. ಜು.12ರಂದು ಅಬ್ಧುಲ್ ಸಲಾಂ ಎಂಬವರು ಪಂಚಾಯತ್ ಗೆ ರೂ.10 ಸಾವಿರ ದಂಡ ಪಾವತಿಸಿರುವುದಾಗಿ ತಿಳಿದುಬಂದಿದೆ.

“ನದಿಗೆ ತ್ಯಾಜ್ಯ ಯಾರೂ ಎಸೆಯಬಾರದು. ರಸ್ತೆಯಲ್ಲಿಯೂ ಎಸೆಯಬಾರದು ಈ ಕುರಿತು ಪಂಚಾಯತ್ ನಿರ್ಣಯದಂತೆ ದಂಡ ಹಾಕಿರುವುದಾಗಿ ಅಜ್ಜಾವರ ಗ್ರಾಮ ಪಂಚಾಯತ್ ಪಿಡಿಒ ತಿಳಿಸಿದ್ದಾರೆ.