ಜಯನಗರ: ರಾತ್ರಿ ವೇಳೆ ಮನೆಯ ಕಾಂಪೌಂಡಿನೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಯುವಕ

0

ಹಿಡಿದು ಪೊಲೀಸರಿಗೆ ಒಪ್ಪಿಸಿದ ಮನೆಯವರು

ಜಯನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಯುವಕನೊಬ್ಬ ರಾತ್ರಿ ವೇಳೆ ಪಕ್ಕದ ಮನೆಯ ಕಾಪೌಂಡ್ ಒಳಗೆ ಬಂದು ಬಾಗಿಲು ತೆರೆಯಲು ಪ್ರಯತ್ನಿಸಿದ್ದು ಮನೆಯವರಿಗೆ ವಿಷಯ ತಿಳಿದು ಅಲ್ಲೇ ಪಕ್ಕದಲ್ಲಿದ್ದ ತಮ್ಮ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ ಹಿನ್ನಲೆ ಅವರು ಬಂದು ಯುವಕನನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದ ಘಟನೆ ಜು. ೧೪ ರಂದು ರಾತ್ರಿ ಸುಮಾರು ೧೧ ಘಂಟೆ ವೇಳೆಗೆ ನಡೆದಿದೆ.

ಜಯನಗರ ಶ್ರೀ ಗಜಾನನ ಭಜನಾ ಮಂದಿರದ ಬಳಿಯ ನಿವಾಸಿ ಕುಸುಮಧರ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು,ಕಳ್ಳನಂತೆ ವರ್ತನೆ ಮಾಡಿದ ವ್ಯಕ್ತಿ ಅಲ್ಲೇ ಪಕ್ಕದ ಮನೆಯಲ್ಲಿ ಬಾಡಿಗೆಗೆ ಇದ್ದ ಕಲ್ಕತ್ತಾ ಮೂಲದ ಮನೆ ಸಾರಣೆ ಕೆಲಸ ಮಾಡುವ ವ್ಯಕ್ತಿ ಎಂದು ತಿಳಿದು ಬಂದಿದೆ.

ಅಂದು ಕುಸುಮಾಧರರವರ ಕುಟುಂಬದ ಸದಸ್ಯರ ಮದುವೆ ಕಾರ್ಯಕ್ರಮ ನಡೆದಿದ್ದು, ರಾತ್ರಿ ಬಂದು ಮನೆಯವರೆಲ್ಲಾ ಮಲಗಿದ ಸಂದರ್ಭ ಮನೆಯ ಮುಂಬಾಗಿಲಿನಲ್ಲಿ ಯಾರೋ ಬಂದು ಬಾಗಿಲು ತೆರೆಯಲು ಪ್ರಯತ್ನಿಸುವ ಶಬ್ದ ಕುಸುಮಾಧರರವರ ಮಗಳಿಗೆ ಕೇಳಿದ್ದು ಅವರು ಕೂಡಲೇ ತಮ್ಮ ತಂದೆಯವರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಅವರು ಮನೆಯ ಕಿಟಕಿಯ ಮೂಲಕ ನೋಡಿದಾಗ ಹೊರಗಡೆ ಜಗುಲಿಯಲ್ಲಿ ಒಬ್ಬ ವ್ಯಕ್ತಿ ನಿಂತು ಮನೆಯ ಒಳಗೆ ನೋಡುತ್ತಿದ್ದು ಕಿಟಕಿ ಗ್ಲಾಸ್ ನಲ್ಲಿ ಕಂಡಿದ್ದು, ಮನೆಯವರು ಕೂಡಲೇ ಮದುವೆ ಕಾರ್ಯಕ್ರಮ ನಡೆದ ತಮ್ಮ ಕುಟುಂಬದವರಿಗೆ ತಿಳಿಸಿದ್ದು ಅಲ್ಲಿಗೆ ಬಂದ ಕೆಲವು ಸದಸ್ಯರು ಕಾಪೌಂಡ್ ಹಾರಿ ಒಳ ಬಂದು ಆತನನ್ನು ಹಿಡಿದಿದ್ದಾರೆ.
ಬಳಿಕ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.