ಬಿಜೆಪಿಯವರು ಜಗದೀಶ್ ಶೆಟ್ಟರ್ ಮನೆ ಮುಂದೆ ಭಜನೆ – ಪ್ರತಿಭಟನೆ ಮಾಡಲಿ; ಪಿ.ಸಿ.
ಸೌಹಾರ್ದಯುತವಾಗಿ ನಡೆಯುವ ಕಾರ್ಯಕ್ರಮಕ್ಕೆ ಮುಂದೆಯೂ ಅಡ್ಡಿಯಾಗುವುದಿಲ್ಲ; ಪಿ.ಎಸ್.
ಶಾಲಾ ಮೈದಾನಗಳಲ್ಲಿ ಯಾವುದೇ ಧಾರ್ಮಿಕ ಹಾಗೂ ಖಾಸಗಿ ಕಾರ್ಯಕ್ರಮ ನಡೆಸಬಾರದೆಂಬ ಸರಕಾರದ ಸುತ್ತೋಲೆಯ ವಿರುದ್ದ ಸುಳ್ಯ ಬಿಜೆಪಿ ನಡೆಸಿದ ಪ್ರತಿಭಟನೆಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸುತ್ತೋಲೆಯನ್ನು ತಂದವರೇ ಬಿಜೆಪಿಯವರು ಅವರ ಮನೆ ಮುಂದೆಯೇ ಭಜನೆ, ಪ್ರತಿಭಟನೆ ನಡೆಸಬೇಕು ,ತಾಲೂಕು ಕಚೇರಿಯ ಮುಂದೆ ಅಲ್ಲ ಎಂದು ಹೇಳಿದೆ.
ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ರವರು ಬಿಜೆಪಿಯ ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿಯಾಗಿರುವ ಸಂದರ್ಭದಲ್ಲಿ ದಿನಾಂಕ 7.2.2013 ರಂದು ಈ ಆದೇಶವನ್ನು ರಾಜ್ಯ ಸರಕಾರ ಹೊರಡಿಸಿದೆ. ಬಿಜೆಪಿಯವರು ಇಂದು ಪ್ರಚಾರಗಿಟ್ಟಿಸುವ ಮತ್ತು ಜ್ಞಾನದ ಕೊರತೆಯಿಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ಪರಿಸ್ಥಿತಿ ಆಗಿದೆ. ಬಿಜೆಪಿಯವರು ತಾಲೂಕು ಕಚೇರಿಯ ಮುಂದೆ ಅಲ್ಲ, ಆದೇಶ ಹೊರಡಿಸಿದ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ಶಾಸಕರ ಮನೆ ಮುಂದೆ ಭಜನೆ ,ಪ್ರತಿಭಟನೆ ನಡೆಸಬೇಕು ಎಂದು ಹೇಳಿದರು.
ಆ ಸಂದರ್ಭದಲ್ಲಿ ಅಂಗಾರರು ಕೂಡ ಶಾಸಕರಾಗಿದ್ದರು, ಅವರು ಕೂಡ ಸದನದಲ್ಲಿ ಎಚ್ಚರಿಕೆಯನ್ನು ಮಾಡದೆ ಈಗ ಬಿಜೆಪಿಯವರು ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಿ.ಸಿ.ಜಯರಾಮ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಮಾತನಾಡಿ ಆದೇಶ ಹೊರಡಿಸುವ ಸಂದರ್ಭದಲ್ಲಿ ಸುಮ್ಮನಿದ್ದವರು ಈಗ ಪ್ರತಿಭಟನೆ ನಡೆಸುತ್ತಿದ್ದಾರೆ.ಕಾಂಗ್ರೆಸ್ ಪಕ್ಷವನ್ನು ಎತ್ತಿ ಕಟ್ಟುವ ಕೆಲಸವನ್ನು ಬಿಜೆಪಿ ಮಾಡಬಾರದು. 2013 ರಲ್ಲಿ ಆದೇಶ ಜಾರಿಯಾದ ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದಲೂ ಯಾವುದೇ ಸಮಸ್ಯೆ ಯಾಗಲಿಲ್ಲ.ಶಾಲಾ ಮೈದಾನದಲ್ಲಿ ಸೌಹಾರ್ದತೆಯಿಂದ ಕಾರ್ಯಕ್ರಮ ನಡೆಸುವುದಕ್ಕೆ ಮುಂದೆಯೂ ತೊಂದರೆಯಾಗುವುದಿಲ್ಲ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿಗೆ ಬೆಲೆಕೊಟ್ಟು ಸೌಹಾರ್ದತೆಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ದ್ರೋಹ
ಕರ್ನಾಟಕದವರೇ ವಿತ್ತ ಸಚಿವರಾಗಿದ್ದೂ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಕೊಡುಗೆ ಶೂನ್ಯ. ಕೇಂದ್ರ ಸರಕಾರ ಮಲತಾಯಿ ಧೋರಣೆ ಮಾಡುತ್ತಿದೆ.ಯಾವುದೇ ಕೊಡುಗೆ ನೀಡದೆ ನಮಗೆ ದ್ರೋಹ ಮಾಡಿದೆ ಎಂದು ಪಿ.ಸಿ.ಹೇಳಿದರು.
ಅಶೋಕ್ ಕುಮಾರ್ ಗೆ ಅಭಿನಂದನೆ
ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರವರು 9/11 ಸಮಸ್ಯೆ ಇತ್ಯರ್ಥಕ್ಕೆ ಹೋರಾಟ ನಡೆಸಿದ್ದಾರೆ. ಮಂಗಳೂರಿನಲ್ಲಿ ಆಗಬೇಕಾದ ಕೆಲಸವನ್ನು ಪಂಚಾಯತ್ ನಲ್ಲಿಯೇ ಸಿಗುವಂತೆ ವ್ಯವಸ್ಥೆ ಮಾಡಿದ ಅವರಿಗೆ ಅಭಿನಂದನೆ ಸಲ್ಲಬೇಕು ಎಂದು ಪಿ.ಸಿ.ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಎಂ.ಎಚ್.ಸುರೇಶ್ ಅಮೈ, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ., ಕಾರ್ಮಿಕ ಮುಖಂಡ ಚಂದ್ರಲಿಂಗಂ , ನಂದರಾಜ್ ಸಂಕೇಶ್ ಉಪಸ್ಥಿತರಿದ್ದರು.