ನೆಲ್ಲೂರು ಕೆಮ್ರಾಜೆ ಗ್ರಾಮಸಭೆಯಲ್ಲಿ ಚರ್ಚೆ
ಶಾಸಕರನ್ನು ಭೇಟಿಯಾದ ಹರೀಶ್ ಕಂಜಿಪಿಲಿ, ಧನಂಜಯ ಕೋಟೆಮಲೆ ತಂಡ – ತಹಶೀಲ್ದಾರ್ ರನ್ನು ಕರೆದು ಚರ್ಚಿಸಿದ ಶಾಸಕರು
ಡೀಮ್ಡ್ ಫಾರೆಸ್ಟ್ ಎಂಬ ಕಾರಣಕ್ಕಾಗಿ ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆಯಲ್ಲಿ ಹಲವಾರು ನಿವಾಸಿಗಳು ಮನೆಯ ಅಡಿಸ್ಥಳದ ಹಕ್ಕುಪತ್ರ ಸಿಗದೆ ಸಮಸ್ಯೆ ಎದುರಿಸುತ್ತಿರುವ ವಿಚಾರ ಕಳೆದ ಗ್ರಾಮಸಭೆಯಲ್ಲಿ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷರು ಗ್ರಾಮದ ಮುಖಂಡರೊಂದಿಗೆ ಶಾಸಕರ ಬಳಿ ತೆರಳಿ ಸಮಸ್ಯೆ ಇತ್ಯರ್ಥಕ್ಕೆ ಶ್ರಮವಹಿಸಿದ ಘಟನೆಯೊಂದು ನೆಲ್ಲೂರು ಕೆಮ್ರಾಜೆ ಗ್ರಾಮದಿಂದ ವರದಿಯಾಗಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ಎಸ್.ಸಿ. ಕಾಲೊನಿಯ 10-15 ಮನೆಗಳಿಗೆ ಅರಣ್ಯ ಇಲಾಖೆಯ ಆಕ್ಷೇಪಣೆಯಿಂದಗಿ ಹಕ್ಕುಪತ್ರ ದೊರೆಯುತ್ತಿಲ್ಲ. 40-50 ವರ್ಷಗಳಿಂದ ವಾಸ್ತವ್ಯದಲ್ಲಿದ್ದರೂ, ಸುತ್ತಮುತ್ತಲಿನವರಿಗೆ ಹಕ್ಕುಪತ್ರ ದೊರೆತಿದ್ದರೂ, 10-15 ಮನೆಗಳು ಮಾತ್ರ ದೊರೆಯದೆ ಸರಕಾರದ ಯಾವುದೇ ಸೌಲಭ್ಯ ಪಡೆಯಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಈ ವಿಚಾರ ಜು.20ರಂದು ನಡೆದ ನೆಲ್ಲೂರು ಕೆಮ್ರಾಜೆ ಗ್ರಾಮಸಭೆಯಲ್ಲಿ ಸುದೀರ್ಘವಾಗಿ ಚರ್ಚೆಯಾಗಿತ್ತು.
ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಈಶ್ವರಪ್ಪ ಹರ್ಲಡ್ಕ ಮತ್ತು ದಿವಾಕರ ನಾಯಕ್ ಎರ್ಮೆಟ್ಟಿ ಹಾಗೂ ಹಾಲಿ ಅಧ್ಯಕ್ಷ ಧನಂಜಯ ಕೋಟೆಮೂಲೆಯವರು ಸಮಸ್ಯೆಯ ಕುರಿತು ಬೆಳಕು ಚೆಲ್ಲಿದ್ದರು.
ಈ ಬಗ್ಗೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ನೆಲ್ಲೂರು ಕೆಮ್ರಾಜೆ ಧನಂಜಯ ಕೋಟೆಮಲೆ, ಮಾಜಿ ಅಧ್ಯಕ್ಷ ಈಶ್ವರಪ್ಪ ಹರ್ಲಡ್ಕ ಹಾಗೂ ಮಿತ್ರಬಳಗ ಎಲಿಮಲೆ ಇದರ ಅಧ್ಯಕ್ಷ ಜಯಂತ ಹರ್ಲಡ್ಕ ರವರು ದಾಸನಕಜೆಯ ನಿವಾಸಿಗಳೊಂದಿಗೆ ಜು.29ರಂದು ಶಾಸಕಿ ಭಾಗೀರಥಿ ಮುರುಳ್ಯರನ್ನು ಭೇಟಿಯಾಗಿ ಸಮಸ್ಯೆ ವಿವರಿಸಿದರು.
ಸಮಸ್ಯೆ ಅರ್ಥ ಮಾಡಿಕೊಂಡ ಶಾಸಕರು, ತಹಶೀಲ್ದಾರ್ ಮಂಜುನಾಥ್ ಮತ್ತು ಗ್ರಾಮ ಆಡಳಿತ ಅಧಿಕಾರಿ ಮಾರುತಿ ಕಾಂಬ್ಳೆಯವರನ್ನು ತನ್ನ ಕಚೇರಿಗೆ ಕರೆಸಿಕೊಂಡು ಮಾಹಿತಿ ಪಡೆದರಲ್ಲದೆ, ಸ್ಥಳ ಪರಿಶೀಲಿಸಿ ಸ್ಥಳೀಯ ನಿವಾಸಿಗಳಿಗೆ ಹಕ್ಕುಪತ್ರ ಸಿಗುವಂತೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸತೀಶ್ ಗುಡ್ಡನಮನೆ, ಜಯಂತ ಹರ್ಲಡ್ಕ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.