ಬೈಕ್ ಅಪಘಾತದಲ್ಲಿ ಇಬ್ಬರ ಮೃತ್ಯು ಪ್ರಕರಣ

0

ಕಳೆದ ರಾತ್ರಿ ಕೊಡಗು ಸಂಪಾಜೆಯ ಕೊಯನಾಡು ಫಾರೆಸ್ಟ್ ಐಬಿ ಬಳಿ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೆಲವು ಸುದ್ದಿಗಳು ಹರಿಡದಾಡತೊಡಗಿದ್ದವು. ಬೈಕ್‌ಗೆ ಕಾರು ಗುದ್ದಿದ ಪರಿಣಾಮ ಅಪಘಾತ ಸಂಭವಿಸಿದ್ದು, ಆ ಕಾರು ಚಾಲಕ ಪೊಲೀಸರಿಗೆ ಶರಣಾಗಿದ್ದಾನೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರತೊಡಗಿದವು.


ಈ ಬಗ್ಗೆ ಮಡಿಕೇರಿ ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಗೆಯವರನ್ನು ಸುದ್ದಿ ವತಿಯಿಂದ ಸಂಪರ್ಕಿಸಿ ವಿಚಾರಿಸಿದಾಗ ಕಾರು ಗುದ್ದಿದ್ದಲ್ಲ, ಬೈಕ್ ಮೋರಿಗೆ ಗುದ್ದಿ ದುರ್ಘಟನೆ ಸಂಭವಿಸಿದೆ. ಕಾರು ಗುದ್ದಿರುವುದಾಗಲೀ, ಚಾಲಕ ಶರಣಾಗತನಾಗಿರುವುದಾಗಲಿ ಸತ್ಯಕ್ಕೆ ದೂರವಾದುದು ಎಂದು ಹೇಳಿದರು.


ಅಪಘಾತ ನಡೆದು ಯುವಕರಿಬ್ಬರು ರಸ್ತೆ ಬದಿಯ ಚರಂಡಿಯಲ್ಲಿ ಬಿದ್ದಿರುವುದನ್ನು ಸ್ಥಳೀಯ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಎಸ್.ಪಿ.ಹನೀಫ್ ಕೊಯನಾಡು ಅವರಿಗೆ ವಿಷಯ ತಿಳಿಸಿದ್ದರು. ಕೂಡಲೇ ಹನೀಫ್ ಅವರು ಸಂಪಾಜೆ ಪೊಲೀಸರಿಗೆ ವಿಷಯ ತಿಳಿಸಿದರೆನ್ನಲಾಗಿದೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮಡಿಕೇರಿ ಎಸ್‌ಐ ಹಾಗೂ ಕೊಡಗು ಜಿಲ್ಲಾ ಡಿವೈಎಸ್‌ಪಿ ಅವರಿಗೆ ವಿಷಯ ತಿಳಿಸಿದರೆನ್ನಲಾಗಿದೆ.
ಮೈಸೂರು ಮೂಲದ ಮನೋಜ್ ಮತ್ತು ಪವನ್ ತಮ್ಮ ಬಾಲ್ಯದಿಂದಲೇ ಸ್ನೇಹಿತರಾಗಿದ್ದು, ಯಾವಗಲೂ ಜೊತೆಯಾಗಿಯೇ ತೆರಳುತ್ತಿದ್ದರು. ಪೊಲೀಸರು ಮನೆಯವರಿಗೆ ವಿಷಯ ತಿಳಿಸಿದ ಮೇರೆಗೆ ಮೈಸೂರಿನಿಂದ ಮೃತರ ಮನೆಯವರು ಮತ್ತು ಸಂಬಂಧಿಕರು ಸಂಪಾಜೆಗೆ ಆಗಮಿಸಿ ಮಧ್ಯಾಹ್ನ ೧೨ ಗಂಟೆಯ ವೇಳೆಗೆ ಎರಡು ಮೃತದೇಹಗಳನ್ನು ಪ್ರತ್ಯೇಕ ಪ್ರತ್ಯೇಕ ಅಂಬ್ಯಲೆನ್ಸ್ ಮೂಲಕ ಮಡಿಕೇರಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೈಸೂರಿಗೆ ಕೊಂಡೊಯ್ಯಲಾಯಿತೆಂದು ತಿಳಿದು ಬಂದಿದೆ.
ಅಪಘಾತ ನಡೆದ ರಭಸಕ್ಕೆ ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಇಬ್ಬರ ಹೆಲ್ಮೆಟ್‌ಗಳು ಕಣಿಯಲ್ಲಿ ಬಿದ್ದಿದ್ದವು. ಇಬ್ಬರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿತ್ತು. ಮೃತದೇಹವನ್ನು ಅಪಘಾತ ಸ್ಥಳದಿಂದ ಎತ್ತಿ ಅಂಬ್ಯುಲೆನ್ಸ್‌ಗೆ ಹಾಕುವಲ್ಲಿ ಸಂಪಾಜೆಯ ಶರತ್ ಕೀಲಾರು, ಎಸ್.ಪಿ.ಹನೀಫ್, ಸುರೇಶ್ ಸಂಪಾಜೆ, ಯೋಗೀಶ್ ಕಲ್ಲುಗುಂಡಿ, ಎಂ.ಜೆ. ಆಂಟೋನಿ, ದಯಾನಂದ ಸಂಪಾಜೆ, ಅರಣ್ಯ ಇಲಾಖೆ ನಾಗರಾಜ್ ಮತ್ತು ಸಿಬ್ಬಂದಿಗಳು ಹಾಗೂ ಸ್ಥಳೀಯರು ಸಹಕರಿಸಿದ್ದರು.