ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಸಂಸತ್ತಿನಲ್ಲಿ ಪ್ರಶ್ನೆ ಎತ್ತಿದ ದ. ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ

0

ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವ ಬೇಡಿಕೆಯ ಪ್ರಸ್ತುತ ಹಂತ ಹಾಗೂ ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರಿಸುವಂತೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಭಾಗದ ಜನರು ಒತ್ತಾಯಿಸುತ್ತಿರುವುದು ಸರಕಾರದ ಗಮನದಲ್ಲಿ ಇದೆಯೇ ? ಎಂದು ಪ್ರಶ್ನೆ ಮಾಡಿದರು ಮತ್ತು ಸರ್ಕಾರ ಈ ಬಗೆಗೆ ಯಾವೆಲ್ಲಾ ಕ್ರಮ ಕೈಗೊಂಡಿದೆ ಎಂದು ಕೇಳಿದರು.

ಪಹ್ವಾ (1996) ಮತ್ತು ಸೀತಾಕಾಂತ್ ಮೊಹಾಪತ್ರ (2003) ಸಮಿತಿಯ ಪ್ರಯತ್ನಗಳನ್ನು ಗಮನದಲ್ಲಿಟ್ಟುಕೊಂಡು ಎಂಟನೇ ಪರಿಚ್ಛೇದದ ಅಡಿಯಲ್ಲಿ ಹೆಚ್ಚಿನ ಭಾಷೆಗಳ ಸೇರ್ಪಡೆಗಾಗಿ ವಿನಂತಿಗಳನ್ನು ಪರಿಗಣಿಸಲು ಯಾವೆಲ್ಲಾ ಪ್ರಯತ್ನಗಳನ್ನು ತೆಗೆದುಕೊಳ್ಳಲಾಗಿದೆ ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ತುಳು ಸೇರಿದಂತೆ ಇನ್ನಿತರ ಹಲವಾರು ಭಾಷೆಗಳು ಎಂಟನೇ ಶೆಡ್ಯೂಲ್‌ಗೆ ಸೇರಿಸಲು ಕಾಲಕಾಲಕ್ಕೆ ಬೇಡಿಕೆಗಳು ಬರುತ್ತಿವೆ, ಯಾವುದೇ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್‌ಗೆ ಸೇರಿಸಲು ಯಾವುದೇ ಸ್ಥಿರ ಮಾನದಂಡಗಳಿಲ್ಲ, ಉಪಭಾಷೆಗಳು ಮತ್ತು ಭಾಷೆಗಳ ವಿಕಸನವು ಕ್ರಿಯಾತ್ಮಕ ಪ್ರಕ್ರಿಯೆಯಾಗಿದ್ದು ಇದರ ಅಭಿವೃದ್ಧಿಯು ಸಾಮಾಜಿಕ – ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳಿಂದ ಪ್ರಭಾವಿತವಾಗಿರುತ್ತದೆ.

ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲು ಭಾಷೆಗಳಿಗೆ ಯಾವುದೇ ಮಾನದಂಡವನ್ನು ನಿಗದಿಪಡಿಸುವುದು ಕಷ್ಟಕರವಾಗಿದೆ. ಪಹ್ವಾ (1996) ಮತ್ತು ಸೀತಾಕಾಂತ್ ಮೊಹಾಪತ್ರ (2003) ಸಮಿತಿಗಳ ಮೂಲಕ ಇಂತಹ ನಿಶ್ಚಿತ ಮಾನದಂಡಗಳನ್ನು ವಿಕಸನಗೊಳಿಸಲು ಹಿಂದಿನ ಪ್ರಯತ್ನಗಳು ಅನಿರ್ದಿಷ್ಟವಾಗಿವೆ,
ಇತರ ಭಾಷೆಗಳನ್ನು 8ನೇ ಶೆಡ್ಯೂಲ್‌ಗೆ ಸೇರಿಸುವ ಭಾವನೆಗಳು ಮತ್ತು ಅವಶ್ಯಕತೆಗಳ ಬಗ್ಗೆ ಸರ್ಕಾರವು ಜಾಗೃತವಾಗಿದೆ ಎಂದು ಸಚಿವರು ಲಿಖಿತ ಉತ್ತರವನ್ನು ಸಲ್ಲಿಸಿದರು.