ಕೇಂದ್ರ ಸರ್ಕಾರದಿಂದ ದ.ಕ ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ದಿಗೆ 42 ಕೋಟಿ ರೂ. ಅನುದಾನ ಬಿಡುಗಡೆ: ಸಂಸದ ಕ್ಯಾಪ್ಟನ್. ಬ್ರಿಜೇಶ್ ಚೌಟ

0

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಟ್ಟು 42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಸದರು ಕೇಂದ್ರ ಸರ್ಕಾರವು, ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ(CRIF) ಅಡಿ ಈ ಅನುದಾನ ನೀಡಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 74.30 ಕಿಲೋ ಮೀಟರ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಈ ಎಲ್ಲಾ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ 42 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಇದೇ ವೇಳೆ ತಿಳಿಸಿದ್ದಾರೆ.

ಸುಳ್ಯ ವಿಧಾನಸಭಾ ಕ್ಷೇತ್ರದ ನಿಂತಿಕಲ್ಲು-ಬೆಳ್ಳಾರೆ-ನೆಟ್ಟಾರು 6.2 ಕಿ.ಮೀ. ರಸ್ತೆ ಮೇಲ್ದರ್ಜೆಗೇರಿಸಲು 3.72 ಕೋ.ರೂ. ಅನುದಾನ, ಸುಳ್ಯ-ಪೈಚಾರು-ಬೆಳ್ಳಾರೆ 3.8 ಕಿಮೀ ರಸ್ತೆ ಮೇಲ್ದರ್ಜೆಗೇರಿಸಲು 2.28 ಕೋ.ರೂ. ಅನುದಾನ, ರಾಜ್ಯ ಹೆದ್ದಾರಿಯಾದ ಸುಬ್ರಹ್ಮಣ್ಯ-ಮಂಜೇಶ್ವರದ 5.2 ಕಿಮೀ ರಸ್ತೆಗೆ 3.12ಕೋ.ರೂ. ಅನುದಾನ, ನಿಂತಿಕಲ್ಲು -ಬೆಳ್ಳಾರೆ-ನೆಟ್ಟಾರು-ಅಮ್ಚಿನಡ್ಕ-ಕಾವು- ಪುತ್ತೂರು ವಿಧಾನಸಭಾ ಕ್ಷೇತ್ರದ ಈಶ್ವರಮಂಗಲ-ಪಳ್ಳತ್ತಾರು ರಾಜ್ಯ ಹೆದ್ದಾರಿಯಿಂದ ಜಿಲ್ಲಾರಸ್ತೆಗೆ ಸಂಪರ್ಕದ 4.8 ಕಿ.ಮೀ ರಸ್ತೆ ಕಾಮಗಾರಿಗೆ 2.88 ಕೋ.ರೂ. ಅನುದಾನ ಮಂಜೂರಾಗಿರುವುದಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ.