ಮುಕ್ಕೂರು : ಎರಡು ದಿನದ ಹದಿನೈದನೆಯ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಚಾಲನೆ

0

ರಾಷ್ಟ್ರಭಕ್ತಿಗೆ ಪೂರಕವಾಗಿ ಗಣೇಶೋತ್ಸವವನ್ನು ಆಚರಿಸುವ ಮೂಲಕ ಮುಕ್ಕೂರು ಗಣೇಶೋತ್ಸವ ಸಮಿತಿ ಅರ್ಥಪೂರ್ಣ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಸಂಗತಿ ಎಂದು ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ನಳಿನ್ ಕುಮಾರ್ ಕಟೀಲು ಹೇಳಿದರು.

ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಂಭ್ರಮದ ಪುಳಕ ಮೂರೈದು- ಹದಿನೈದರ ಹುತ್ತರಿಯ ಎರಡು ದಿನದ ಕಾರ್ಯಕ್ರಮದ ಮೊದಲನೆಯ ದಿನ ಸೆ.7 ರಂದು ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಣೇಶ ಚತುರ್ಥಿಯ ಮಹತ್ವವನ್ನು ಅರಿತುಕೊಂಡು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಕಾರ್ಯಕ್ರಮ ನಡೆದಿದೆ. ಸಂಘಟನೆಯ ಮೂಲಕ ಇನ್ನಷ್ಟು ಕಾರ್ಯಕ್ರಮಗಳು‌ ನೆರವೇರಲಿ ಎಂದರು.

ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ಸಂಘಟಿತ ಪ್ರಯತ್ನದಿಂದ ಯಶಸ್ಸು ಸಾಧ್ಯವಿದೆ. ಮಳೆಯ ನಡುವೆಯೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದು ಇದು ಅವರ ಶ್ರದ್ಧೆಗೆ ಉದಾಹರಣೆ. ಮುಕ್ಕೂರು ಗಣೇಶೋತ್ಸವ ಸಮಿತಿ ಹತ್ತೂರಿನಲ್ಲಿ‌ ಹೆಸರು ಗಳಿಸಲಿ ಎಂದರು.

ಕ್ರೀಡಾಕೂಟವನ್ನು ದೀಪ‌ ಬೆಳಗಿಸಿ ಉದ್ಘಾಟಿಸಿದ ಎಂಜಿನಿಯರ್ ನರಸಿಂಹ ತೇಜಸ್ವಿ ಕಾನಾವು ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ನೇಸರ ಯುವಕ ಮಂಡಲ‌ ಮಾದರಿ‌ ಕಾರ್ಯಕ್ರಮಗಳ ಮೂಲಕ ತನ್ನ ಛಾಪನ್ನು ತೋರಿಸಿದೆ. ಮೂರೈದು ಎಂಬ ಸುಂದರ ಕಾರ್ಯಕ್ರಮದ ಮೂಲಕ ಜನರನ್ನು ಮತ್ತೊಮ್ಮೆ ತಲುಪಿದೆ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ‌ ಅಧ್ಯಕ್ಷ ಪಿ.ಪದ್ಮನಾಭ ಶೆಟ್ಟಿ ಮಾತನಾಡಿ, ಭಕ್ತಿ, ಶ್ರದ್ಧೆಯಿಂದ ಯಾವುದೇ ಕೆಲಸ ಮಾಡಿದರೂ ಅದರಿಂದ ಫಲ‌ ಸಿಗುತ್ತದೆ. ಮುಕ್ಕೂರು ಗಣೇಶೋತ್ಸವ ಸಮಿತಿಯ ಯಶಸ್ಸಿನ ಹಿಂದೆ ಶ್ರದ್ಧೆ, ಭಕ್ತಿ ಇದೆ ಎಂದರು.

ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ಮಾತನಾಡಿ, ಸಂಘಟನೆಗಳು ಸಮಾಜಕ್ಕೆ‌ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡಾಗ ಅದರಿಂದ ಒಳಿತಾಗುತ್ತದೆ. ಗಣೇಶೋತ್ಸವ ಸಮಿತಿ ಚೌತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಹಬ್ಬದ ಸಂದೇಶವನ್ನು ಎಲ್ಲಡೆ ಪಸರಿಸಿದೆ ಎಂದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ‌ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ಮಾತನಾಡಿ, ಕಾರ್ಯಕ್ರಮಗಳ ಸಂಘಟನೆಯ ಹಿಂದೆ ಸಾಕಷ್ಟು ಶ್ರಮ ಇರುತ್ತದೆ. ಪರಿಶ್ರಮ, ಒಗ್ಗಟ್ಟಿನ ದುಡಿಮೆಯ ಫಲವಾಗಿ ಮುಕ್ಕೂರಿನ ಗಣೇಶೋತ್ಸವ ಸಮಿತಿಯ ಎಲ್ಲ ಕಾರ್ಯಕ್ರಮಗಳು ಯಶಸ್ಸು ಕಂಡಿದೆ ಎಂದರು.

ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ಪೆರುವಾಜೆ ಗ್ರಾ.ಪಂ.ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಊರವರು ನೀಡುತ್ತಿರುವ ಬೆಂಬಲದಿಂದ ಗಣೇಶೋತ್ಸವ ಸಮಿತಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿದೆ. ಮೂರೈದು- ಹದಿನೈದರ ಹುತ್ತರಿಯ ಹಿಂದೆ ಹಲವರ ಸಹಕಾರ, ಪರಿಶ್ರಮ ಇದ್ದು ಅವರಿಗೆಲ್ಲಾ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಗೌರವ ಸಮರ್ಪಣೆ
ಇದೇ ಸಂದರ್ಭದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ನಳೀಲು ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ‌ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ ಅವರನ್ನು ಸಮಿತಿ ಪರವಾಗಿ ಗೌರವಿಸಲಾಯಿತು. ಅತಿಥಿಗಳಿಗೆ ಗುಲಾಬಿ ಗಿಡ ನೀಡಲಾಯಿತು.

ಈ ಸಂದರ್ಭದಲ್ಲಿ ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ತಾರಾನಾಥ ಕುಂಡಡ್ಕ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಜ್ಯೋತಿ ಯುವಕ ಮಂಡಲದ ಮಾಜಿ ಕಾರ್ಯದರ್ಶಿ ನವೀನ್ ಶೆಟ್ಟಿ ಬರಮೇಲು, ಕುಂಡಡ್ಕ-ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿದ್ದರು. ಪುಣ್ಯ ಮತ್ತು ತಮಢ ಪ್ರಾರ್ಥಿಸಿದರು. ವಿಕ್ಷೀತಾ ಕೂರೋಡಿ ವಂದಿಸಿದರು. ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ ಸಹಕರಿಸಿದರು.

ಗರಿಷ್ಟ ಮಂದಿ ಭಾಗಿ
ಅಂಗನವಾಡಿ, ಶಾಲಾ ಕಾಲೇಜು ವಿಭಾಗ, ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು. ಹಗ್ಗಜಗ್ಗಾಟ, ವಾಲಿಬಾಲ್, ತ್ರೋಬಾಲ್, ಗೋಣಿಚೀಲ ಓಟ ಸಹಿತ ವಿವಿಧ ಸ್ಪರ್ಧೆಗಳು ಜನರ ಮನಸೂರೆಗೊಂಡಿತು. ಮಳೆ ಲೆಕ್ಕಿಸದೆ ಊರು ಪರವೂರಿನಿಂದ ಗರಿಷ್ಟ ಸಂಖ್ಯೆಯಲ್ಲಿ ಜನರು ಆಗಮಿಸಿದರು. ಮಧ್ಯಾಹ್ನ 650 ಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.