ಮಂಡೆಕೋಲು ಸಹಕಾರ ಸಂಘದ ಮಹಾಸಭೆ

0

42 ಕೋಟಿ 11 ಲಕ್ಷ ವ್ಯವಹಾರ – 42 ಲಕ್ಷ ಲಾಭ – ಶೇ.6.5 ಡಿವಿಡೆಂಡ್

ಸಹಕಾರ ಸಂಘದಲ್ಲಿ ಮಲ್ಟಿ ಸರ್ವಿಸ್ ಸೆಂಟರ್ ಉದ್ಘಾಟನೆ

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.೧೦ರಂದು ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತರವರ ಅಧ್ಯಕ್ಷತೆ ವಹಿಸಿದ್ದರು. ವರದಿ ಸಾಲಿನಲ್ಲಿ ಸಂಘವು ೪೨ ಕೋಟಿ ೧೧ ಲಕ್ಷ ೨೩ ಸಾವಿರ ವ್ಯವಹಾರ ನಡೆಸಿದ್ದು ೪೨ ಲಕ್ಷದ ೨೨ ಸಾವಿರ ಲಾಭ ಗಳಿಸಿದೆ. ವರದಿ ಸಾಲಿನಲ್ಲಿ ಸದಸ್ಯರಿಗೆ ಶೇ.೬.೫ ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಮಾಹಿತಿ ನೀಡಿ, ಸಹಕಾರ ಸಂಘದ ಪೇರಾಲು ಶಾಖೆಯಲ್ಲಿ ಪೂರ್ಣ ಪ್ರಮಾಣದ ಸೇವೆ ನೀಡುವ ನಿಟ್ಟಿನಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಮತ್ತು ಸಹಕಾರ ಸಂಘದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಸಹಕಾರದಲ್ಲಿ ನೆಫ್ಟ್ ಸೇರಿದಂತೆ ಇನ್ನಿತರ ವ್ಯವಹಾರವನ್ನು ಆರಂಭಿಸಲಾಗಿದೆ. ಬೈಲಾ ದ ಸಮಗ್ರ ತಿದ್ದು ಪಡಿ ಮಾಡಲಾಗಿದ್ದು ಹೊಸದಾಗಿ ಚಿನ್ನದ ನಾಣ್ಯ ಖರೀದಿ ಸಾಲವನ್ನು ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ. ಮಲ್ಟಿ ಸರ್ವಿಸ್ ಸೆಂಟರನ್ನು ತೆರೆಯಲಾಗಿದೆ ನಮ್ಮೆಲ್ಲ ಗ್ರಾಹಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಶೈಕ್ಷಣಿಕ ಪುರಸ್ಕಾರ : ಸಹಕಾರ ಸಂಘದ ಸದಸ್ಯರ ಮಕ್ಕಳು ೨೦೨೩ – ೨೪ನೇ ಸಾಲಿನ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಗೈದ ೧೨ ಮಂದಿ ವಿದ್ಯಾರ್ಥಿಗಳನ್ನು ನಗದು ನೀಡಿ ಪುರಸ್ಕರಿಸಲಾಯಿತು.
ಸನ್ಮಾನ : ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ ಆಯ್ಕೆಯಾದ ಎಸ್.ಎನ್. ಮನ್ಮಥರನ್ನು ಹಾಗೂ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾಗಿರುವ ಬಾಲಕೃಷ್ಣ ಪುತ್ಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಉದ್ಘಾಟನೆ : ಸಹಕಾರ ಸಂಘದ ಮಲ್ಟಿ ಸರ್ವಿಸ್ ಸೆಂಟರನ್ನು ತೆರೆಯಲಾಗಿದ್ದು ಇದರ ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್.ಎನ್. ಮನ್ಮತರು ಉದ್ಘಾಟಿಸಿದರು. ಸಹಕಾರ ಸಂಘಗಳು ರೈತನ ಮಿತ್ರನಿದ್ದಂತೆ. ಎಲ್ಲ ಸಂದರ್ಭದಲ್ಲಿ ರೈತನ ಕೈ ಬಲ ಪಡಿಸುವುದು ಸಹಕಾರಿ ಸಂಘ. ರೈತರು ಸಹಕಾರ ಸಂಘದಲ್ಲಿ ಸಿಗುವ ೦% ಹಾಗೂ ೩% ಸಾಲವನ್ನು ಪಡೆದು ಸುಮ್ಮನಿರದೇ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಂಘವನ್ನು ಬಲ ಪಡಿಸಲು ಸಹಕಾರಿಯಾಗಬೇಕು. ಮಂಡೆಕೋಲು ಸಹಕಾರ ಸಂಘವು ಮಲ್ಟಿ ಸರ್ವಿಸ್ ಸೆಂಟರನ್ನು ಆರಂಭಿಸಿದ್ದು ಇದರ ಪ್ರಯೋಜನವನ್ನು ಈ ಭಾಗದ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಕಾರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಲಜಾ ದೇವರಗುಂಡ, ನಿರ್ದೇಶಕರುಗಳಾದ ಸುನಿಲ್ ಪಾತಿಕಲ್ಲು, ಭಾಸ್ಕರ ಮಿತ್ತಪೇರಾಲು, ಭಾರತಿ ಉಗ್ರಾಣಿಮನೆ, ಮೋನಪ್ಪ ನಾಯ್ಕ ಬೆಂಗತ್ತಮಲೆ, ರವಿ ಚೇರದಮೂಲೆ, ಆಂತರಿಕ ಲೆಕ್ಕ ಪರಿಶೋಧಕರಾದ ಅನಂತ ಕೃಷ್ಣ ಚಾಕೊಟೆ ವೇದಿಕೆಯಲ್ಲಿದ್ದರು.
ನಿರ್ದೇಶಕ ಪದ್ಮನಾಭ ಚೌಟಾಜೆ ಸ್ವಾಗತಿಸಿ, ನಿರ್ದೇಶಕ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕ ಚಂದ್ರಜಿತ್ ಮಾವಂಜಿ ವಂದಿಸಿದರು. ಸಿಬ್ಬಂದಿ ಶ್ರೀಕಾಂತ್ ಮಾವಂಜಿ ಕಾರ್ಯಕ್ರಮ ನಿರೂಪಿಸಿದರು.