ಮೈಸೂರಿನಲ್ಲಿ ಡಾ.ಶ್ವೇತಾ ಮಡಪ್ಪಾಡಿ ಯವರ ಧ್ವನಿ ಪೌಂಡೇಷನ್ ಸಾರಥ್ಯದ ಸ್ವರ ಕುಟೀರ ಉದ್ಘಾಟನೆ

0

ಧ್ವನಿ ಫೌಂಡೇಷನ್ ಈ ನೆಲದ ಜನರ ಧ್ವನಿಯಾಗಿ ಕೆಲಸ ಮಾಡಲಿ :ಸಚಿವ ಎಚ್ ಸಿ ಮಹದೇವಪ್ಪ

ಸಂಗೀತ ಮನುಷ್ಯನ ಮಾನಸಿಕ ಅರೋಗ್ಯವನ್ನು ವೃದ್ಧಿಗೊಳಿಸುತ್ತದೆ. ಮನುಷ್ಯ – ಮನುಷ್ಯನ ನಡುವೆ ಸಾಮರಸ್ಯ ತರುತ್ತದೆ. ಸಂಗೀತಕ್ಕೆ ಚಿಕಿತ್ಸಕ ಗುಣವಿದ್ದು ಅಂತಹ ಸಂಗೀತವನ್ನು ಪೋಷಿಸುವ ಕೆಲಸವನ್ನು ಧ್ವನಿ ಫೌಂಡೇಷನ್ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಂಸ್ಥೆ ಈ ನೆಲದ ಜನರ ಧ್ವನಿಯಾಗಿ ಕೆಲಸ ಮಾಡಲಿ ಎಂದು ಡಾ. ಎಚ್. ಸಿ ಮಹದೇವಪ್ಪ ಹೇಳಿದರು. ಮೈಸೂರಿನ ಸೋಮನಾಥ ನಗರದಲ್ಲಿ ಡಾ. ಶ್ವೇತಾ ಮಡಪ್ಪಾಡಿ ಅವರ ಧ್ವನಿ ಫೌಂಡೇಷನ್ ನ ‘ಸ್ವರ ಕುಟೀರ’ ಎಂಬ ಸಂಗೀತ ನೃತ್ಯ ಸಭಾಂಗಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧ್ವನಿ ಫೌಂಡೇಷನ್ ಮಹಿಳೆಯರ ಶಕ್ತಿಯಾಗಿ, ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡಲಿದೆ ಎಂಬುದು ಬಹಳ ಸಂತೋಷದ ಸಂಗತಿ. ನಮ್ಮ ಸಮಾಜದಲ್ಲಿ ದನಿಯಿಲ್ಲದವರಿಗೆ ಧ್ವನಿ ಫೌಂಡೇಶನ್ ಧ್ವನಿ ತಂದುಕೊಡುವ ಹಾಗಾಗಲಿ ಎಂದು ಅವರು ಆಶಿಸಿದರು. ಧ್ವನಿ ಫೌಂಡೇಶನ್ ಸಂಸ್ಥೆಯನ್ನು ಕೂಡ ನಾನೇ ಉದ್ಘಾಟಿಸಿದ್ದೆ. ಈಗ ಸ್ವರ ಕುಟೀರವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ. ಮುಂಬರುವ ದಿನದಲ್ಲಿ ಧ್ವನಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವಂತಾಗಲಿ ಎಂದು ಅವರು ಹಾರೈಸಿದರು.

ಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಬಿ. ಸುರೇಶ್ ಮಾತನಾಡಿ ಇಂದು ಸಣ್ಣದಾಗಿ ಆರಂಭವಾಗಿರುವ ಧ್ವನಿಯ ಚಟುವಟಿಕೆಗಳು ಮುಂದೆ ಈ ನಾಡು ಮೆಚ್ಚುವ ಹಾಗೇ ನಡೆಯಲಿ. ಧ್ವನಿ ಫೌಂಡೇಶನ್ ಮೂಲಕ ನೂರಾರು ವಿದ್ಯಾರ್ಥಿಗಳು ಹೊರಬರಲಿ ಎಂದು ಹೇಳಿದರು. ಡಾ. ಶ್ವೇತಾ ಮಡಪ್ಪಾಡಿ ಅವರು ಕಲಾ ಕ್ಷೇತ್ರದಲ್ಲಿ ಅದ್ಭುತ ಕಾರ್ಯಗಳನ್ನು ಮಾಡಲಿ ಎಂದು ಆಶಿಸಿದರು.


ಶ್ರೀಮತಿ ಶಾರದಾ ಭಟ್ ಕಟ್ಟಿಗೆ ಮಾತಾಡಿ ಡಾ.ಶ್ವೇತಾ ಮಡಪ್ಪಾಡಿ ಅವರ ಜನಪರ ಕಾರ್ಯ ಬಹಳ ಶ್ರಮದಾಯಕ. ಅವರು ಹಲವು ಕಷ್ಟಗಳ ಮೂಲಕ ಇಂದು ಈ ಹಂತವನ್ನು ತಲುಪಿದ್ದಾರೆ. ಧ್ವನಿ ಫೌಂಡೇಷನ್ ಅವರ ಶ್ರಮದ ಫಲ ಎಂದು ಹೇಳಿದರು.
ಉಸ್ತಾದ್ ಫಯಾಜ್ ಖಾನ್ ಅವರ ಸಂಗೀತ ಇಡೀ ಸ್ವರ ಕುಟೀರದ ಆವರಣವನ್ನು ನಾದಲೋಕದಲ್ಲಿ ತೇಲಿಸಿತು. ಹಿಂದೂಸ್ತಾನಿ ಗಾಯನದಿಂದ ಆರಂಭಿಸಿ, ದಾಸರಪದಗಳನ್ನು ಪ್ರಸ್ತುತಪಡಿಸಿದ ಉಸ್ತಾದರು ತಮ್ಮ ಗಾಯನದ ಮೂಲಕ ಅಭಿಮಾನಿಗಳ ಮನಸೂರೆಗೊಂಡರು.ವಿಶ್ವ ವಿಖ್ಯಾತ ಶಿಲ್ಪ ಕಲಾವಿದ ಶ್ರೀ ಜಾನ್ ದೇವರಾಜ್ ತಮ್ಮ ವಿಭಿನ್ನ ಸಂಗೀತದ ಮೂಲಕ ಸಭಾಂಗಣದಲ್ಲಿ ಇದ್ದವರನ್ನು ರಂಜಿಸಿದರು. ಧ್ವನಿ ಫೌಂಡೇಷನ್ ನ ವಿದ್ಯಾರ್ಥಿಗಳು ಹಾಡುಗಳನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಆಯೋಜಕರಾದ ಡಾ. ಶ್ವೇತಾ ಮಡಪ್ಪಾಡಿ, ಹಾಗೂ ಶ್ರೀ ಪ್ರಸಾದ್ ಮೈಸೂರು ಉಪಸ್ಥಿತರಿದ್ದರು.