ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಗಾಂಧೀಜಿ – ಶಾಸ್ತ್ರೀಜಿ ಜಯಂತಿ

0


” ಸತ್ಯವಾಗಿರಿ, ಸೌಮ್ಯವಾಗಿರಿ ನಿರ್ಭಯರಾಗಿರಿ’, ‘ಮಾಡು ಇಲ್ಲವೇ ಮಡಿ’ ಎಂಬುದಾಗಿ ಕರೆ ನೀಡಿದವರು ಗಾಂಧೀಜಿ. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಗಾಂಧೀಜಿಯವರ ಕೊಡುಗೆ ಅಪಾರ. ಗಾಂಧೀಜಿಯವರು ಕೇವಲ ರಾಷ್ಟ್ರ ನಿರ್ಮಾಪಕರಾಗಿರಲಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಅವರು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವಾಗಿದ್ದರು. ನಮ್ಮ ಕೆಲಸವನ್ನು ಮಾಡಿಕೊಳ್ಳಬೇಕು. ಸತ್ಯ, ಅಹಿಂಸೆ, ಸಮಾನತೆ, ಸರಳತೆ, ಏಕತೆ ಮತ್ತು ದೇಶಭಕ್ತಿಯನ್ನು ಎಲ್ಲರೂ ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕಿಯಾದ ಶ್ರೀಮತಿ ಜಯಂತಿ ಅವರು ಹೇಳಿದರು.


ಹಾಗೆಯೇ ‘ ಜೈ ಜವಾನ್ ಜೈ ಕಿಸಾನ್’ ಎಂಬ ಘೋಷಣೆಯ ಮೂಲಕ ರಾಷ್ಟ್ರದ ಜನತೆಗೆ ಕರೆ ನೀಡಿದ ನಮ್ಮ ದೇಶದ ಎರಡನೇ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಕೂಡ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. ದೇಶಪ್ರೇಮ, ಆತ್ಮಸ್ಥೈರ್ಯ, ಸ್ವಾಭಿಮಾನ, ಪ್ರಾಮಾಣಿಕತೆಯ ಗುಣಗಳನ್ನು ಚಿಕ್ಕಂದಿನಲ್ಲಿಯೇ ಮೈಗೂಡಿಸಿಕೊಂಡ ಅದ್ಭುತ ವ್ಯಕ್ತಿತ್ವ ಶಾಸ್ತ್ರಿಯವರದ್ದು. ಈ ಗುಣಗಳನ್ನು ನಾವು ಕೂಡ ಜೀವನದಲ್ಲಿ ಅಳವಡಿಸಿಕೊಂಡು ದೇಶ ಸೇವೆಯಲ್ಲಿ ಭಾಗಿಗಳಾಗಬೇಕು’ ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಶಿಕ್ಷಕಿಯಾದ ಶ್ರೀಮತಿ ಕವಿತಾರವರು ಹೇಳಿದರು.


ಅ.2ರಂದು ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಗಾಂಧೀಜಿ – ಶಾಸ್ತ್ರೀಜಿ ಜನ್ಮದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಶಿಕ್ಷಕ ದೇವಿ ಪ್ರಸಾದ್ ಜಿ. ಸಿ ಅವರು ಮಾತನಾಡಿ “ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜೀವನ ದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧಕರಾಗಬೇಕು, ಆ ಮೂಲಕ ಸಾಮಾನ್ಯ ವ್ಯಕ್ತಿಯೂ ಅಸಾಮಾನ್ಯನಾಗಬೇಕು.”
ತಫಾ ಕಾರ್ಯಕ್ರಮದ ಮೊದಲಿಗೆ ಶಾಲೆಯ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶ್ರೀಮತಿ ಗಿರಿಜಾ ಕುಮಾರಿ ಸ್ವಾಗತಿಸಿ, ಶ್ರೀಮತಿ ಶ್ರೀದೇವಿ ಪಿ. ಎಸ್. ವಂದಿಸಿ, ಕುಮಾರಿ ಚೈತ್ರಶ್ರೀ ನಿರೂಪಿಸಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.