ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿ ಆಚರಣೆ

0

ಗಾಂಧಿ ನಡಿಗೆಯ ಮೂಲಕ ಹೆಜ್ಜೆ ಹಾಕಿದ ಕಾಂಗ್ರೆಸ್ ಮುಖಂಡರು

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಪ್ರಯುಕ್ತ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿಯನ್ನು ಅ.2ರಂದು ಆಚರಿಸಲಾಯಿತು.

ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಅವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚಣೆಯನ್ನು ಮಾಡುವ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಿದರು.


ತದನಂತರ ಕಾಂಗ್ರೆಸ್ ನಾಯಕರು ಕಲ್ಲುಗುಂಡಿ ಪೇಟೆಯಲ್ಲಿ ಗಾಂಧಿ ನಡಿಗೆಯ ಮೂಲಕ ಹೆಜ್ಜೆ ಹಾಕಿದರು. ಕೂಲಿಶೆಡ್ಡ್ ನಲ್ಲಿ ನಡೆದ ಗಾಂಧಿ ನಡಿಗೆಯ ಸಮಾರೋಪವನ್ನು ಉದ್ದೇಶಿಸಿ ಕರ್ನಾಟಕ ಸರ್ಕಾರದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ಸದಸ್ಯ ಕೆ.ಪಿ.ಜಾನಿಯವರು ಮಾತನಾಡಿ ಗಾಂಧೀಜಿಯವರ ತತ್ವಾದರ್ಶಗಳನ್ನು ಪ್ರಸ್ತುತ ನಾಗರಿಕ ಸಮಾಜ ಅಳವಡಿಸಿಕೊಳ್ಳಬೇಕು ಹಾಗೂ ಅಹಿಂಸಾ ತತ್ವಗಳ ಮೂಲಕ ಸಾಮರಸ್ಯದ ಸಮಾಜವನ್ನು ನಿರ್ಮಿಸಲು ಎಲ್ಲರು ಕೈಜೋಡಿಸಬೇಕೆಂದು ಅವರು ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕರವರು ಮಾತನಾಡಿ ಗಾಂಧೀಜಿಯವರು ಅಧ್ಯಕ್ಷತೆಯನ್ನು ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಹೊಸ್ತಿಲಲ್ಲಿ ನಾವಿದ್ದೇವೆ, ಕಾಂಗ್ರೆಸ್ ಸರ್ಕಾರದ ಜನಪ್ರಿಯ ಹಾಗೂ ಬಡವರ ಪರ ಯೋಜನೆಗಳು ಜಾರಿಗೊಳ್ಳಲು ಗಾಂಧೀಜಿಯವರ ಚಿಂತನೆಗಳೇ ಕಾರಣವೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿಸಂಪಾಜೆ ವಲಯ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎ.ಕೆ.ಇಬ್ರಾಹಿಂ, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಮಾಜಿ ಸದಸ್ಯರಾದ ಎ.ಕೆ.ಹನೀಫ್, ಬೆಂಜಮೀನ್ ಡಿ’ಸೋಜ, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರಾದ ಬಿ.ಎಸ್.ಕಾಂತಿ, ಪ್ರಮುಖರಾದ ಪಿ.ಎ.ಉಮ್ಮರ್ ಗೂನಡ್ಕ, ತಾಜ್ ಮಹಮ್ಮದ್ ಸಂಪಾಜೆ, ಎಚ್.ಎ.ಹಮೀದ್ ಸಂಪಾಜೆ, ವಸಂತ ಗೌಡ ಪೆಲ್ತಡ್ಕ, ನಾಗಮುತ್ತು, ಸೆಬಾಸ್ಟಿಯನ್, ಶಮೀರ್ ತಾಜ್ ಸಂಪಾಜೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೆ.ಪಿ.ಸಿ.ಸಿ.ವಕ್ತಾರರಾದ ಶೌವಾದ್ ಗೂನಡ್ಕರವರು ಸ್ವಾಗತಿಸಿ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಜ್ಞಾನಶೀಲನ್ ರಾಜು ನೆಲ್ಲಿಕುಮೇರಿ ವಂದಿಸಿದರು.