ಸುಳ್ಯ ಠಾಣೆಗೆ ದೂರು, ಪೊಲೀಸರ ವಿಚಾರಣೆ
ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿರುವ ಸುಳ್ಯ ಮೂಲದ ಮಹಿಳೆಗೆ ರಾತ್ರಿ ವೇಳೆ ಫೋನ್ ಮಾಡಿ ಅನುಚಿತ ಮತ್ತು ಅಸಭ್ಯ ರೀತಿಯಲ್ಲಿ ಮಾತನಾಡಿದ ಯುವಕನ ಮೇಲೆ ಮಹಿಳೆ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸುಮಾರು ಒಂದು ತಿಂಗಳ ಹಿಂದೆ ಈ ಮಹಿಳೆಯ ಮೊಬೈಲ್ ಗೆ ಕರೆ ಮಾಡಿದ ಅಪರಿಚಿತ ಯುವಕ ಅನುಚಿತವಾಗಿ ಮಾತನಾಡಿದ್ದನೆನ್ನಲಾಗಿದೆ.
ಮಹಿಳೆ ಎಚ್ಚರಿಕೆ ನೀಡಿದ ಹೊರತಾಗಿಯೂ ಈತ ಈ ಚಾಳಿ ಮುಂದುವರಿಸಿದಾಗ ಮಹಿಳೆ ತಮ್ಮ ಮನೆಯವರಿಗೆ ಹಾಗೂ ಪರಿಚಯದ ಪೊಲೀಸ್ ಅಧಿಕಾರಿಯೊಬ್ಬರಿಗೆ ತಿಳಿಸಿದ್ದು, ಅವರು ಈತನ ವಿವರ ಪತ್ತೆ ಮಾಡಿದ್ದು ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಮಡಪ್ಪಾಡಿಯ ರಾಜೇಶ್ ಎನ್. ಎಂದು ತಿಳಿಯಿತು. ಬಳಿಕ ಈತನ ಮೇಲೆ ಮಹಿಳೆ ಇ ಮೇಲ್ ಮೂಲಕ ಸುಳ್ಯ ಪೊಲೀಸರಿಗೆ ದೂರು ನೀಡಿದರು.
ನಿನ್ನೆ ಈ ಯುವಕನನ್ನು ಸುಳ್ಯ ಪೊಲೀಸರು ವಿಚಾರಣೆಗೆ ಕರೆಸಿದ್ದು, ಈ ವೇಳೆ ದೂರು ನೀಡಿದ ಮಹಿಳೆ ಕೂಡಾ ಠಾಣೆಗೆ ಬಂದಿದ್ದರು. ಅಲ್ಲಿ ಅವರು ಯುವಕನನ್ನು ತರಾಟೆಗೆತ್ತಿಕೊಂಡರೆನ್ನಲಾಗಿದೆ. ಪೊಲೀಸರು ರಾಜೇಶ್ ಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡರೆಂದು ತಿಳಿದು ಬಂದಿದೆ.
” ವಿಚಾರಣೆ ವೇಳೆ ಆತ ತಾನು ಕುಡಿದು ಈ ರೀತಿ ಮಾಡುವುದಾಗಿ ಹೇಳುತ್ತಿದ್ದ. ಆದರೆ ಆತನಲ್ಲಿ ಪಶ್ಚಾತ್ತಾಪ ಭಾವ ಕಾಣುತ್ತಿರಲಿಲ್ಲ. ಮಹಿಳೆಯರೊಂದಿಗೆ ಹೀಗೆ ಅಸಭ್ಯವಾಗಿ ವರ್ತಿಸುವವರಿಗೆ ಪಾಠ ಆಗಬೇಕೆಂದು ಪೊಲೀಸ್ ದೂರು ನೀಡಿದ್ದೇನೆ ಎಂದು ಮಹಿಳೆ ಸುದ್ದಿಗೆ ತಿಳಿಸಿದ್ದಾರೆ.