ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಾಲಯದ ಭೋಜನ ಪ್ರಸಾದದಲ್ಲಿ ಬದಲಾವಣೆ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ವ್ಯವಸ್ಥೆಯಲ್ಲಿ ಖಾದ್ಯಗಳಲ್ಲಿ ವಿನೂತನ ಬದಲಾವಣೆಗಳನ್ನು ತರಲಾಗಿದೆ. ಇದರಿಂದಾಗಿ ಭಕ್ತರಿಗೆ ವಿಶೇಷ ಭೋಜನ ಪ್ರಸಾದ ಪ್ರತಿದಿನ ದೊರಕುವಂತಾಗಿದೆ.


ಈ ಹಿಂದೆ ವಿಶೇಷ ದಿನಗಳನ್ನು ಹೊರತು ಪಡಿಸಿ ಪ್ರತಿದಿನ ಒಂದೇ ರೀತಿಯ ಪಾಯಸವನ್ನು ಭಕ್ತರಿಗೆ ವಿತರಿಸಲಾಗುತ್ತಿತ್ತು. ಆದರೆ ಇದೀಗ ನೂತನ ಯೋಜನೆ ಮೂಲಕ ಒಂದು ದಿವಸ ಒಂದು ಬಗೆಯ ಪಾಯಾಸವಾದರೆ ಮರುದಿನ ಮತ್ತೊಂದು ಬಗೆಯ ತೆರನಾದ ಪಾಯಸವನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆಯನ್ನು ಮಾಡಿದ್ದಾರೆ.

ಸಾಮಾನ್ಯವಾಗಿ ಕಡ್ಲೆ ಬೇಳೆ ಮಾತ್ರ ಮಾಡಲಾಗುತಿದ್ದು ಇದೀಗ ಹೆಸರು ಬೇಳೆ, ಕಡ್ಳೆ ಬೇಳೆ ಸಾಬಕ್ಕಿ, ಗೋದಿ ಕಡಿ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ,ರವೆ ಪಾಯಸ ಮತ್ತು ಸಿರಿಧಾನ್ಯ ಸೇರಿದಂತೆ ವಿವಿಧ ಬಗೆಯ ಪಾಯಸವನ್ನು ದಿನವಾಹಿ ತಯಾರಿಸಿ ಭಕ್ತರಿಗೆ ವಿತರಿಸಲಾಗುತ್ತದೆ. ಪ್ರಸಾದ ಬೋಜನವು ಅತ್ಯಂತ ಸ್ವಾಧಿಷ್ಠ ಮತ್ತು ಪೌಷ್ಠಿಕಾಂಶಗಳಿಂದ ಕೂಡಿರಬೇಕೆಂದು ಅತ್ಯುತ್ತಮವಾದ 15 ಬಗೆಯ ತರಕಾರಿಗಳನ್ನು ಪ್ರತಿದಿನ ಸಾಂಬಾರಿಗೆ ಉಪಯೋಗಿಸಲು ಯೋಜನೆ ಮಾಡಲಾಗಿರುವುದಾಗಿ ತಿಳಿದು ಬಂದಿದೆ.


ದೇವಳದಲ್ಲಿ ಸಂಪ್ರದಾಯ ಪ್ರಕಾರ ಬಾಳೆ ಎಲೆಯಲ್ಲಿ ಬೋಜನ ಪ್ರಸಾದ ವಿತರಣೆಯಾಗುತ್ತದೆ.ಪ್ರತಿನಿತ್ಯ ಭಕ್ತರಿಗೆ ಅನಾದಿ ಕಾಲದಿಂದ ಪ್ರಸಾದದಲ್ಲಿ ವಿತರಿಸಲಾಗುತ್ತಿರುವ ಸಾಂಪ್ರದಾಯಿಕ ಚಟ್ನಿ, ಪಲ್ಯ, ಅನ್ನ, ಸಾರು, ಸಾಂಬಾರು, ಪಾಯಸ, ಮಜ್ಜಿಗೆ ವಿತರಣೆಯಾಗುತ್ತದೆ. ಜಾತ್ರೆ ಮತ್ತು ಹೊಸ್ತಾರೋಗಣೆಯ ದಿನಗಳಲ್ಲಿ ಭಕ್ಷ್ಯಗಳ ಸಂಖ್ಯೆ ಅಧಿಕವಿರುತ್ತದೆ. ಅಲ್ಲದೆ ಏಕಾದಶಿ ದಿನ ಅವಲಕ್ಕಿ, ಉಪ್ಪಿಟ್ಟು ಮತ್ತು ಮಜ್ಜಿಗೆ ವಿತರಿಸಲಾಗುತ್ತದೆ.