ಸೇವಾ ನಿವೃತ್ತ ಯೋಧ, ಜೂನಿಯರ್ ಕಮಿಷನ್ಡ್ ಆಫೀಸರ್’ ಗಿರೀಶ್ ಎ ಕೆ ರವರಿಗೆ ಹುಟ್ಟೂರಿನಲ್ಲಿ ಅದ್ದೂರಿ ಸ್ವಾಗತ

0

ಪಂಜದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ- ಆರತಿ ಬೆಳಗಿ ಹಣೆಗೆ ತಿಲಕವಿಟ್ಟ ಮಾತೆಯರು

26 ವರ್ಷ ಸುಧೀರ್ಘ ದೇಶ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಯೋಧ ಜೂನಿಯರ್ ಕಮಿಷನ್ಡ್ ಆಫೀಸರ್’ ಕೂತ್ಕುಂಜ ಗ್ರಾಮದ ಕಕ್ಯಾನ ಆರ್ನೂಜಿ -ಕೊಡ್ತುಗುಳಿ ಗಿರೀಶ್ ಎ ಕೆ ರವರಿಗೆ ಹುಟ್ಟೂರಿಗೆ ಸ್ವಾಗತ ಕಾರ್ಯಕ್ರಮ ನ.3 ರಂದು ಪಂಜದಲ್ಲಿ ಕೂತ್ಕುಂಜ ಶಿವಾಜಿ ಯುವಕ ಮಂಡಲದ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಿತು.

ಪಂಜ ಪೇಟೆಯ ದೀನ್ ದಯಾಳ್ ವಾಣಿಜ್ಯ ಸಂಕೀರ್ಣದ ಎದುರು ಸ್ವಾಗತ ಕಾರ್ಯಕ್ರಮ ಜರುಗಿತು.
ವಿವಿಧ ಸಂಘ,ಸಂಸ್ಥೆಗಳು, ಬಂಧು ಮಿತ್ರರು, ನೆಂಟರಿಷ್ಟರು, ಕುಟುಂಬಸ್ಥರು ಅವರಿಗೆ ಹೂ, ಹೂವಿನ ಹಾರ,ಶಾಲು ಹೊದಿಸಿ ಸ್ವಾಗತಿಸಿದರು. ಮಾತೆಯರು ಆರತಿ ಬೆಳಗಿ ಹಣೆಗೆ ತಿಲಕ ವಿಟ್ಟರು.

“ಭಾರತೀಯ ಯೋಧನಿಗೆ ಕರ್ತವ್ಯದಲ್ಲಿದ್ದಾಗ ಊಟ ನೀರು ಮುಖ್ಯವಲ್ಲ, ಅದೆಂತಹ ಚಳಿ, ಎಷ್ಟೋ ಎತ್ತರದ ಶಿಖರವಾಗಿರಲಿ ಅವುಗಳ ಎದುರಿಸಿ ಕೊಂಡು ದೇಶ ಸೇವೆ ಒಂದೇ ಗುರಿ” ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಿವೃತ್ತ ಯೋಧ ಜಗದೀಶ್ ರವರು ಹೇಳಿದರು.

“ಸೇನೆಯಲ್ಲಿ ನನ್ನ ಜೊತೆಯಾಗಿ ಇದ್ದವರನ್ನು ಬಿಟ್ಟು ಬರುವಾಗ ತುಂಬಾ ದುಃಖವಾಗಿತ್ತು. ಇಲ್ಲಿ ನೀಡಿರುವ ಸ್ವಾಗತ ಗೌರದಿಂದ ಈಗ ನನಗೆ ತುಂಬಾ ಸಂತೋಷವಾಗಿದೆ. ನನಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಸಹಕರಿಸಿದ ನನ್ನ ಮನೆಯವರಿಗೆ, ನೆಂಟರಿಷ್ಟರಿಗೆ ಮತ್ತು ಇಲ್ಲಿ ಸೇರಿದ ಎಲ್ಲರಿಗೂ ಮನದಾಳದ ಕೃತಜ್ಞತೆಗಳು ಎಂದು ನಿವೃತ್ತ ಯೋಧ ಜೂನಿಯರ್ ಕಮಿಷನ್ಡ್ ಆಫೀಸರ್’ ಗಿರೀಶ್ ಎ ಕೆ ಹೇಳಿದರು. ಕೂತ್ಕುಂಜ ಶಿವಾಜಿ ಯುವಕ ಮಂಡಲದ ಅಧ್ಯಕ್ಷ ಆದರ್ಶ ಚಿದ್ಗಲ್ಲು ಸಭಾಧ್ಯಕ್ಷತೆ ವಹಿಸಿದ್ದರು.
ಗಿರೀಶ್ ಎ ಕೆ ರವರ ಪತ್ನಿ ಶ್ರೀಮತಿ ಚಿತ್ರ ಗಿರೀಶ್ , ಗಿರೀಶ್ ರವರ ತಾಯಿ ಶ್ರೀಮತಿ ಉಮಾವತಿ ನಾರಾಯಣ ಗೌಡ, ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಯೋಗೀಶ್ ಚಿದ್ಗಲ್ಲು, ಕಾರ್ಯದರ್ಶಿ ಲಿಖಿತ್ ಅಜ್ಜಿಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ವರುಷಗಳ ಹಿಂದೆ ಸೇನೆಗೆ ಸೇರ್ಪಡೆ ಗೋಂಡ ಯೋಧ ಕಾರ್ತಿಕ್ ಚಿದ್ಗಲ್ಲು ರವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಯರಾಮ ಕಲ್ಲಾಜೆ ಸ್ವಾಗತಿಸಿದರು. ಶ್ರೀಮತಿ ಸುಶ್ಮಿತಾ ಆದಿತ್ಯ ಚಿದ್ಗಲ್ಲು ನಿರೂಪಿಸಿದರು. ಲಿಖಿತ್ ಅಜ್ಜಿಹಿತ್ಲು ವಂದಿಸಿದರು.

ಬಳಿಕ ಯೋಧ ಜೂನಿಯರ್ ಕಮಿಷನ್ಡ್ ಆಫೀಸರ್’ ಗಿರೀಶ್ ಎ ಕೆ ರವರನ್ನು ತೆರೆದ ವಾಹನದಲ್ಲಿ ಪಂಜ ಪೇಟೆಯ ಮೂಲಕ ಕಕ್ಯಾನ- ಆರ್ನೂಜಿ ಯವರೆಗೆ ವಾಹನ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಾಹನಗಳು ಪಾಲ್ಗೊಂಡು ಮೆರುಗು ನೀಡಿತು.