ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ಜಾಲ್ಸೂರಿನಲ್ಲಿ ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನದ ಪ್ರಥಮ ಸಭೆ

0

ಗ್ರಾಮದಲ್ಲಿರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಒಟ್ಟುಗೂಡಿಸುವ ಸುದ್ದಿ ಅಭಿಯಾನಕ್ಕೆ ಕೈಜೋಡಿಸೋಣ: ಜಾಕೆ ಸದಾನಂದ

ಗ್ರಾಮದ ಮನೆ ಮನೆಗೆ ಮಾಧ್ಯಮ ಮುಟ್ಟಿದಾಗ ಸುದ್ದಿ ಹಾಗೂ ಜನರ ನಡುವಿನ ಸಂಬಂಧಗಳು ಬೆಳೆಯುತ್ತದೆ: ಡಾ. ಯು.ಪಿ. ಶಿವಾನಂದ

ಸುದ್ದಿ ಅರಿವು ಕೃಷಿ ಕೇಂದ್ರದ ವತಿಯಿಂದ ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನದ ಪ್ರಥಮ ಸಭೆಯು ಜಾಲ್ಸೂರು ಗ್ರಾಮ ಪಂಚಾಯತಿ ಸಭಾಭವನದಲ್ಲಿ ನ.30ರಂದು ಅಪರಾಹ್ನ ಜರುಗಿತು.

ಕಾರ್ಯಕ್ರಮವನ್ನು ಜಾಲ್ಸೂರಿನ ಪಯಸ್ವಿನಿ ಎಜ್ಯುಕೇಶನ್ ಸೊಸೈಟಿ ಸಂಚಾಲಕರಾದ ಜಾಕೆ ಸದಾನಂದ ಗೌಡರು ಉದ್ಘಾಟಿಸಿ, ಸುದ್ದಿ ಸಂಸ್ಥಾಪಕರಾದ ಡಾ. ಯು.ಪಿ. ಶಿವಾನಂದರು ಸುಳ್ಯದಲ್ಲಿ ಗಾಯತ್ರಿ ನರ್ಸಿಂಗ್ ಹೋಮ್ ಸ್ಥಾಪಿಸಿ, ವೈದ್ಯಕೀಯ ಸೇವೆ ಮಾಡುತ್ತಿದ್ದರು.

ಆದರೆ ರೋಗಿಗಳಿಗಿಂತ ಸಮಾಜದ ಜನರ ಮಧ್ಯೆ ಇರಬೇಕೆಂಬ ಚಿಂತನೆಯಿಂದ ಬಳಕೆದಾರರ ವೇದಿಕೆಯ ಮೂಲಕ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಸ್ಥಾಪಿಸಿ, ಪತ್ರಿಕಾ ಮಾಧ್ಯಮದಲ್ಲಿ ಯಶಸ್ಸು ಕಂಡಿದ್ದಾರೆ.
ಬಹಳ ಹಿಂದಿನಿಂದಲೂ ಡಾಕ್ಟ್ರ ಸಂಪರ್ಕ ನನಗೆ ಇದೆ. ಅವರದು ಹೋರಾಟದ ಬದುಕು. ಪ್ರತೀ ಗ್ರಾಮದ ಮನೆ ಮನೆಯಲ್ಲಿ ಉದ್ಯೋಗ ಮಾಡುವವರ ಮಾಹಿತಿ, ಕೃಷಿಕರ, ಸಣ್ಣ ಉದ್ದಿಮೆದಾರರ ಮಾಹಿತಿ ಸಂಗ್ರಹಿಸುವ ಮೂಲಕ ಶಿಸ್ತುಬದ್ಧ ಲಂಚ – ಭ್ರಷ್ಟಾಚಾರ ಮುಕ್ತ ಸಮಾಜ ಕಟ್ಟಲು ಪ್ರಯತ್ನ ಪಟ್ಟವರು ಡಾ. ಯು.ಪಿ. ಶಿವಾನಂದರು ಎಂದು ಹೇಳಿದರು.

ಸಾರ್ವಜನಿಕ ವ್ಯವಸ್ಥೆಯಲ್ಲಿ ಗ್ರಾಮದಲ್ಲಿರುವ ಸಂಪನ್ಮೂಲಗಳನ್ನು ಕ್ರೋಡೀಕರಿಸಿ ಒಟ್ಟುಗೂಡಿಸುವಲ್ಲಿ ಸುದ್ದಿ ಸಂಸ್ಥೆ ಹಮ್ಮಿಕೊಂಡ ನಮ್ಮ ಗ್ರಾಮ ನಮ್ಮ ಹೆಮ್ಮೆ ಅಭಿಯಾನಕ್ಕೆ ನಾವು ಕೈಜೋಡಿಸೋಣ ಎಂದು ಜಾಕೆ ಸದಾನಂದ ಗೌಡರು ಹೇಳಿದರು.

ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೆಶಕರಾದ ಡಾ. ಯು.ಪಿ. ಶಿವಾನಂದ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ ಊರಿನ ಜನರಿಗೆ ಬೇಕಾದ ಮಾಹಿತಿ ಸಂಗ್ರಹ ಮಾಡುವುದೇ ಸುದ್ದಿಯ ಉದ್ಧೇಶವಾಗಿದೆ. ನಮ್ಮ ಊರಿನ ಜನರ ವರದಿಗಳು ನಮಗೆ ತಿಳಿಯದಿದ್ದರೆ ನಾವು ಬೆಳೆಯಲು ಸಾಧ್ಯವಿಲ್ಲ. ಗ್ರಾಮ – ಗ್ರಾಮದ ಜನರ ವರದಿಗಳು ಕೇವಲ ಸುದ್ದಿ ಪತ್ರಿಕೆಯಲ್ಲಿ ಮಾತ್ರ ಬರಲು ಸಾಧ್ಯ.ಆ ಮೂಲಕ ಸುದ್ದಿ ಪತ್ರಿಕೆಯು ಜನರ ನಡುವಿನ ಸಂಬಂಧವನ್ನು ಬೆಳೆಸುತ್ತದೆ. ಇದಕ್ಕಾಗಿ ಮಾಧ್ಯಮವಾಗಿ ಸುದ್ದಿ ಜನರೊಂದಿಗೆ ಇರಲಿದೆ ಎಂದು ಹೇಳಿದರು.


ಇತ್ತೀಚಿನ ದಿನಗಳಲ್ಲಿ ಊರಿನ ಸ್ವಚ್ಛ ಪರಿಸರ ಒಳ್ಳೆಯದೆಂದು ಕೆಲಸಕ್ಕೆ ಪರವೂರಿಗೆ ಹೋದ ಜನರು ಊರಲ್ಲಿ ಬಂದು ಕೃಷಿ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ ಜಾಲ್ಸೂರು ಗ್ರಾಮದಲ್ಲಿ ಉದ್ಯಮ ಮಾಡಲು ಅವಕಾಶಗಳಿವೆ. ಜನರು ಗ್ರಾಮದಲ್ಲಿ ಸಣ್ಣ ಉದ್ದಿಮೆಗಳನ್ನು ಮಾಡುವುದರಿಂದ ಊರಿನ ಜನರಿಗೆ ಪ್ರಯೋಜನವಾಗುತ್ತದೆ. ಇದರಿಂದ ದೇವಸ್ಥಾನ, ದೈವಸ್ಥಾನ, ಮಸೀದಿಗಳೂ ಅಭಿವೃದ್ಧಿ ಹೊಂದುತ್ತದೆ.


ಜಾಲ್ಸೂರು ಗ್ರಾಮದಲ್ಲಿರುವ ಗ್ರಾಮ ಪಂಚಾಯತಿ, ಸೊಸೈಟಿ, ಶಾಲೆ, ದೇವಸ್ಥಾನ, ಮಸೀದಿ, ಗೇರುಬೀಜ ಫ್ಯಾಕ್ಟರಿ ನಮ್ಮ ಹೆಮ್ಮೆ‌. ಸ್ವಚ್ಛಗ್ರಾಮ ಆರೋಗ್ಯಕ್ಕೆ ಒಳ್ಳೆಯದು. ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡಬೇಕು. ಮನೆ ಮನೆಗೆ ಮಾಧ್ಯಮ ಮುಟ್ಟಿದಾಗ ಊರು ಅಭಿವೃದ್ಧಿಯಾಗುತ್ತದೆ. ಆಗ ಊರಿಗೆ ಕೊಡುಗೆಗಳನ್ನು ಕೊಡಲು ಜನರು ಮುಂದೆ ಬರುತ್ತಾರೆ ಎಂದು ಡಾ. ಯು.ಪಿ. ಶಿವಾನಂದರು ಹೇಳಿದರು.

ವೇದಿಕೆಯಲ್ಲಿ ಜಾಲ್ಸೂರು ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಜಾಲ್ಸೂರು ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಜಾಲ್ಸೂರಿನ ಹಿರಿಯ ವರ್ತಕರು ಹಾಗೂ ಜಾಲ್ಸೂರಿನ ಸುದ್ದಿ ಸೆಂಟರ್ ಮಾಲಕ ಎಂ. ಸುಂದರೇಶ್ ಭಟ್ ಜಾಲ್ಸೂರು, ಸುಳ್ಯ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು‌.

ಕಾರ್ಯಕ್ರಮದಲ್ಲಿ ಜಾಲ್ಸೂರು ಗ್ರಾ.ಪಂ. ಸದಸ್ಯರುಗಳು, ಜಾಲ್ಸೂರಿನ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸೇರಿದಂತೆ ಸುಮಾರು ಐವತ್ತು ಮಂದಿ ಜಾಲ್ಸೂರು ಗ್ರಾಮಸ್ಥರು ಉಪಸ್ಥಿತರಿದ್ದು, ನಮ್ಮ ಗ್ರಾಮ ನಮ್ಮ ಹೆಮ್ಮೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಪ್ರಾಸ್ತಾವಿಕವಾಗಿ ನಮ್ಮ ಗ್ರಾಮ ನಮ್ಮ ಹೆಮ್ಮೆ ಅರಿವು ಅಭಿಯಾನದ ಕುರಿತು ಮಾತನಾಡಿದರು. ಸುದ್ದಿ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಸ್ವಾಗತಿಸಿ, ಸುದ್ದಿ ವರದಿಗಾರರಾದ ವಿನಯ್ ಜಾಲ್ಸೂರು ವಂದಿಸಿ, ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಬಳಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.