ಬೆಳ್ಳಾರೆ ಸೊಸೈಟಿ ಚುನಾವಣೆಯ ವೇಳೆ ಕಾಂಗ್ರೆಸ್ ಬಿಜೆಪಿ ಮುಖಂಡರ ಹೊಕೈ

0


ಇಂದು ಬೆಳ್ಳಾರೆ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗಿನಿಂದಲೇ ಕಾಂಗ್ರೆಸ್ ಬೆಂಲಿತರು ಮತ್ತು ಬಿಜೆಪಿ ಬೆಂಬಲಿತರ ಮಧ್ಯೆ ಬಿರುಸಿನ ಪೈಪೋಟಿ ಇರುವುದು ಕಂಡು ಬಂದಿತ್ತು. ಬೆಳಿಗ್ಗೆ ಆ ಎರಡೂ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಮಿಲಾಯಿಸಿದರೆಂಬ ಘಟನೆಯೂ ವರದಿಯಾಗಿದೆ.


ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರು ತಮ್ಮ ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆ ಇರುವಂತಹ ಚೀಟಿಗಳನ್ನು ಮತ ಚಲಾಯಿಸಲು ಬರುವವರ ಕೈಗೆ ಕೊಡುತ್ತಿದ್ದರೆಂದೂ, ಆ ಸಂದರ್ಭ ಕಾಂಗ್ರೆಸ್‌ನವರು ಕೊಟ್ಟ ಚೀಟಿಯನ್ನು ಬಿಜೆಪಿಯವರು ಹಿಂತೆಗೆದುಕೊಂಡು ಅವರ ಪಕ್ಷದ ಅಭ್ಯರ್ಥಿಗಳ ಚಿಹ್ನೆ ಇರುವ ಪಟ್ಟಿಯನ್ನು ಕೊಟ್ಟರೆಂಬ ಕಾರಣಕ್ಕಾಗಿ ಎರಡೂ ಪಕ್ಷಗಳ ಮುಖಂಡರ ಮಧ್ಯೆ ಚಕಮಕಿ ಆರಂಭವಾಯಿತು. ಆ ಬಳಿಕ ಕಾಂಗ್ರೆಸ್ ಮುಖಂಡ ಅನಿಲ್ ರೈ ಹಾಗೂ ಬಿಜೆಪಿ ಮುಖಂಡ ಆರ್.ಕೆ. ಭಟ್ ಕುರುಂಬುಡೇಲು ಅವರು ಪರಸ್ಪರ ಕೈಕೈ ಮಿಲಾಯಿಸಿಕೊಂಡರೆಂದು ತಿಳಿದುಬಂದಿದೆ.

ರಾಮಕೃಷ್ಣ ಭಟ್ ಕುರುಂಬುಡೇಲು ಅವರು ಅನಿಲ್ ರೈಯವರ ಬಗ್ಗೆ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದಾರೆನ್ನಲಾದ ಮಾತುಗಳು ಈ ಘರ್ಷಣೆಗೆ ಕಾರಣವೆಂದು ಹೇಳಲಾಗಿದೆ.

ಈ ಸಂದರ್ಭ ಎರಡೂ ಪಕ್ಷಗಳ ಮುಖಂಡರು ಪರಸ್ಪರ ವಿರುದ್ಧ ಗುಂಪು ಸೇರಿ ವಾಗ್ವಾದ ನಡೆಸಿದರೆಂದೂ ಬಳಿಕ ಅಲ್ಲಿದ್ದ ಹಿರಿಯರು ಜಗಳ ಬಿಡಿಸಿದರೆಂದೂ ಹೇಳಲಾಗಿದೆ. ಈ ಘಟನೆ ನಡೆಯುವಾಗ ಪೊಲೀಸರು ಇರಲಿಲ್ಲ. ಅವರು ಆ ನಂತರ ಬಂದು ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಬಂದೋಬಸ್ತ್ ವ್ಯವಸ್ಥೆ ನಡೆಸಿದರು.
ಈ ಘರ್ಷಣೆಯ ಪರಿಣಾಮವಾಗಿ ಸಂಜೆ ಚುನಾವಣೆ ಮುಗಿದ ಬಳಿಕ ಮತ್ತೆ ಘರ್ಷಣೆ ಉಂಟಾಗಬಹುದೆಂಬ ಜನರು ಮಾತನಾಡಿಕೊಳ್ಳುತ್ತಿದ್ದಾರೆ.