ಕಸ್ತೂರಿರಂಗನ್ ವರದಿ : ಕೇಂದ್ರ ಸರಕಾರ ಜನರ ಪರವಾಗಿಯೇ ಇದೆ : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

0

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಕೇಂದ್ರ ಸರಕಾರ ಜನರ ಪರವಾಗಿಯೇ ನಿಲ್ಲುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ‌ ಹೇಳಿದರು.

ಜ.1ರಂದು ಕೇರ್ಪಡ ದೇವಸ್ಥಾನಕ್ಕೆ ಬ್ರಹ್ಮಕಲಶ ಧಾರ್ಮಿಕ ಸಭೆಗೆ ಆಗಮಿಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು.

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಫಿಸಿಕಲ್ ಸರ್ವೆ ನಡೆಸಿದಾಗ ಮಾತ್ರ ಯಥಾ ಸ್ಥಿತಿ ತಿಳಿಯಲಿದೆ. ಆದರೆ ಕೇರಳ ರಾಜ್ಯ ಹೊರತುಪಡಿಸಿ ಯಾವುದೇ ರಾಜ್ಯ ಫಿಸಿಕಲ್ ಸರ್ವೆ ನಡೆಸಿ ವರದಿ ನೀಡಿಲ್ಲ. ಇದು ಹಿಂದಿನವರು ಮಾಡಿರುವ ತಪ್ಪು. ಏರಿಯಲ್ ಸರ್ವೆ ಮಾಡಿ ಈ ವರದಿ ಮಾಡಲಾಗಿದೆ. ಫಿಸಿಕಲ್ ಸರ್ವೆ ಮಾಡಬೇಕು. ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಎಷ್ಟು ತೋಟ ಇದೆ, ಎಷ್ಟು ಕಾಡು ಎಂಬ ಸರ್ವೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಆದರೆ ಕಸ್ತೂರಿ ರಂಗನ್ ವರದಿ ಸರ್ವೆ ಮಾಡಿರುವುದು ಹೆಲಿಕಾಪ್ಟರ್ ಮೂಲಕ. ಎಲ್ಲಿ ಕಾಫಿ, ಅಡಿಕೆ, ತೆಂಗಿನ ಮತ್ತಿತರ ತೋಟ ಇದೆಯೋ ಅಲ್ಲಿ ಹಸುರು ಬಂದಿದೆ. ಈ ಕಾರಣದಿಂದ ಈ ಎಲ್ಲವನ್ನೂ ಕಾಡು ಎಂದು ಅವರು ತೀರ್ಮಾಣ ಮಾಡಿದ್ದಾರೆ. ಇದು ತಪ್ಪು ಎಂಬುದನ್ನು ನಾವು ಬಹಳ ಹಿಂದೆಯೇ ತಿಳಿಸಿದ್ದೆವು. ಈ ಹಿಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ತಿಳಿಸಿದ್ದೆವು. ಆದರೆ ಕೇರಳ ಒಂದೇ ರಾಜ್ಯ ಫಿಸಿಕಲ್ ಸರ್ವೆ ಮಾಡಿ ವರದಿ ನೀಡಿದೆ, ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಈ ವರೆಗೆ ಯಥಾ ಸ್ಥಿತಿಯಲ್ಲಿ ಫಿಸಿಕಲ್ ಸರ್ವೆ ಆಗಿಲ್ಲ. ಫಿಸಿಕಲ್ ಸರ್ವೆ ಮಾಡಿದಾಗ ಮಾತ್ರ ಈ ಭಾಗದಲ್ಲಿರುವ ತೋಟ, ವಿದ್ಯಾಸಂಸ್ಥೆ, ಕಲ್ಚರಲ್ ಸೆಂಟರ್, ಕಾಡು, ತೋಟ ಇರುವುದು ತಿಳಿಯುತ್ತದೆ. ಕಾಡನ್ನು ಮತ್ತು ತೋಟವನ್ನು ಬೈಫರ್ಗಿಕೇಟ್ ಮಾಡುವ ಕೆಲಸ ಆಗಬೇಕಿತ್ತು. ಈ ರೀತಿಯ ಯಥಾ ಸ್ಥಿತಿಯ ವರದಿಯನ್ನು ಕೇರಳ ರಾಜ್ಯ ಹೊರತು ಪಡಿಸಿ ಉಳಿದ ಯಾವ ರಾಜ್ಯವೂ ನೀಡಿಲ್ಲ, ಈ ವರದಿ ನೀಡಬೇಕು ಎಂಬುದು ಸುಪ್ರೀಂ ಕೋರ್ಟ್ ಅಪೇಕ್ಷೆ. ಅದನ್ನು ನಾವು ಹಿಂದಿನಿಂದ ಹಾಗೂ ಇವತ್ತೂ ಒತ್ತಾಯಿಸುತ್ತೇವೆ. ಆಗ ಮಾತ್ರ ಇದಕ್ಕೆ ನ್ಯಾಯ ಸಿಗಲು ಸಾಧ್ಯ‌. ಈ ಹಿಂದೆ ಸುಪ್ರೀಂ ಕೋರ್ಟ್‌ ಹೇಳಿತ್ತು ಇಲ್ಲಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು, ಆದರೆ ಇವಾಗ ರೆಡ್ ಝೋನ್ ಇಂಡಸ್ಟ್ರೀಸ್ ಹೊರತು ಪಡಿಸಿ ಬಾಕಿ ಯಾವುದೇ ರೈತರು ಮಾಡುವ ಕೆಲಸಕ್ಕೆ ಯಾವುದೇ ಆತಂಕ ಇಲ್ಲ. ಕಸ್ತೂರಿ ರಂಗನ್ ವರದಿ ಸಹಜವಾಗಿ ನಮಗೆ ಆತಂಕ ತರುವಂತಹದ್ದೇ. ಆದರೆ ಈಗ ಕೇಂದ್ರ ಸರಕಾರ ಹೇಳಿದೆ. ನಮ್ಮ ರೈತರಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡಬಾರದು ಮತ್ತು ಯಥಾ ಸ್ಥಿತಿ ವರದಿಯನ್ನು ರಾಜ್ಯ ಸರಕಾರಗಳು ನೀಡಲು ತಿಳಿಸಿದೆ. ಅದಕ್ಕಾಗಿ ಕೇಂದ್ರ ಸರಕಾರ ರೈತರ ಪರವಾಗಿ ನಿಂತಿದೆ, ರೈತರ ಪರವಾಗಿ ವಾದ ಮಂಡನೆ ಮಾಡುತ್ತಿದೆ. ಸರ್ವೆ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕಾಗಿದ್ದು, ಅದನ್ನು ರಾಜ್ಯ ಸರಕಾರ ಮಾಡಬೇಕು ಎಂದು ಅವರು ಒತ್ತಾಯಿಸಿದರು‌. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಜತೆಗಿದ್ದರು.