ಅಜ್ಜಾವರ ಮೇನಾಲ ಉರೂಸ್: ಸೌಹಾರ್ದ ಸಂಗಮ

0

ಸಮಾಜದಲ್ಲಿ ಪರಸ್ಪರ ದ್ವೇಷದ ಗೋಡೆ ಕಟ್ಟುವ ಬದಲು ಪ್ರೀತಿಯ ಸೇತುವೆ ನಿರ್ಮಿಸಿ ಸುಂದರ ಬದುಕು ಕಟ್ಟಬೇಕು.ವಿನಾಶದಿಂದ ವಿಕಾಸದತ್ತ ನಮ್ಮೆಲ್ಲರ ಬದುಕು ಸಾಗಬೇಕು ಎಂದು ಅಜ್ಜಾವರ ಮೇನಾಲ ಉರೂಸ್ ಸಮಾರಂಭದ ಅಂಗವಾಗಿ ಜ 21 ರಂದು ಮೇನಾಲದಲ್ಲಿ ನಡೆದ ಸೌಹಾರ್ದ ಸಂಗಮ ಸಭೆಯಲ್ಲಿ ಭಾಗವಹಿಸಿದ ಮುಖಂಡರುಗಳು ಒಕ್ಕೊರೊಲಿನಿಂದ ಸೌಹಾರ್ದತೆಯ ಸಂದೇಶ ವನ್ನು ನೀಡಿದರು.

ನಮ್ಮೊಳಗಿನ ಅರಿವಿನ ಹಿಂದೆ ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಮೆರೆಯಬೇಕು. ಮಹಾತ್ಮಗಾಂಧಿ,ಬುದ್ಧ, ಬಸವೇಶ್ವರರು ಇವರುಗಳು ವಿಶ್ವಕ್ಕೆ ಶಾಂತಿ ಪಾಠವನ್ನು ಭೋದನೆ ಮಾಡಿದವರು. ಅವರುಗಳ ಅನುಯಾಯಿಗಳಾಗಿ ನಾವು ಇರಬೇಕು ಎಂದು ಹೇಳಿದರು.

ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಸೌಹಾರ್ದತೆಯ ಅಭಿಮತ ವ್ಯಕ್ತ ಪಡಿಸಿ ಸೌಹಾರ್ಧ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ‘ಸೌಹಾರ್ದ ಎಂದರೆ ಎಲ್ಲರ ಮನಸ್ಸಿನ ಭಾವನೆಗಳು ಅರಳುವಿಕೆ ಯಾಗಬೇಕೇ ವಿನಃ ತೆರಳುವಿಕೆ ಅಥವಾ ಕೆದಕುವಿಕೆ ಆಗಬಾರದು.ಪರಸ್ಪರ ಹೃದಯಗಳನ್ನು ಜೋಡಿಸುವ ವೇದಿಕೆಯಾಗಿ ಸೌಹಾರ್ದ ವೇದಿಕೆಗಳು ಆಗಬೇಕು. ಅಂತಹಾ ವೇದಿಕೆಯನ್ನು ಇಲ್ಲಿಯ ಮುಕ್ತೇಸರರಾದ ಗುಡ್ಡಪ್ಪ ರೈ ರವರು ನೇತೃತ್ವ ವಹಿಸಿ ಮಾಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.


ಮಂದಿರವೇ ಇರಲಿ, ಮಸೀದಿ, ಚರ್ಚ್ ಇರಲಿ ಇಲ್ಲಿ ಅವರರವರ ಧರ್ಮದವರು ಶುದ್ಧ ಮನಸ್ಸಿನಿಂದ ಪ್ರಾರ್ಥನೆ ಮಾಡುವ ಸ್ಥಳವಾಗಿದೆ. ಅಲ್ಲಿ ಎಲ್ಲರೂ ಲೋಕ ಶಾಂತಿಗಾಗಿಯೇ ಬೇಡುತ್ತಾರೆ. ಕೇವಲ ಒಂದು ಧರ್ಮಕ್ಕಾಗಿ ಮಾತ್ರ ಯಾರು ಕೂಡ ಬೇಡುವುದಿಲ್ಲ. ಆದರಿಂದ ಮನುಷ್ಯ ಕುಲ ಅತ್ಯಂತ ಶ್ರೇಷ್ಠ ಕುಲವಾಗಿದೆ. ನಾಮಗಳು ಹಲವು ಇದ್ದರು ದೇವರು ಒಬ್ಬನೇ ಹಾಗಿದ್ದಾನೆ, ಮತ್ತೇಕೆ ನಮ್ಮಲ್ಲಿ ಹಗೆ ಮತ್ತು ವೈಷಮ್ಯ. ಬನ್ನಿ ಒಂದಾಗಿ ಬಾಳೋಣ. ಸುಂದರ ಭಾರತವನ್ನು ಕಟ್ಟೋಣ ಎಂದು ಸಂದೇಶ ನೀಡಿದರು.

ಸ್ಥಳ ಮುಕ್ತೇಸರರಾದ ಮೇನಾಲ ಗುಡ್ಡಪ್ಪ ರೈರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ‘ಇಲ್ಲಿಯ ಮಣ್ಣಿನಲ್ಲಿ ವಿರಮಿಸುವ ಮಹಾನರು ಊರಿಗೆ ಶಾಂತಿ ಸೌಹಾರ್ದತೆಯನ್ನು ನೀಡಿದವರು.ಅದು ಇಂದಿಗೂ ಮುಂದುವರಿಯುತ್ತಿದೆ. ಹೃದಯಗಳ ಒಂದು ಸೇರಿಸುವ ವೇದಿಕೆ ಮೇನಾಲ ಉರೂಸ್ ಸೌಹಾರ್ಧ ಸಂಗಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಭಾರತ ಸೌಹಾರ್ಧತೆಯ ಬೆಳಕನ್ನು ಕೊಡಿಸುವ ದೇಶ, ಈ ದೇಶದ ಶಕ್ತಿ ಅಪಾರವಾಗಿದೆ.ಕ್ರೂರತೆಯನ್ನುಸರಿಪಡಿಸುವುದಕ್ಕಾಗಿಯೇ ಧರ್ಮ ಸ್ಥಾಪನೆಯಾಗಿದೆ.
ಕೇಡನ್ನು ಸಮಾಜಕ್ಕೆ ಕೊಡುವ ಯಾವುದೇ ಧರ್ಮ ಅದು ಧರ್ಮವಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಲಕ್ಷ್ಮೀಶ ಗಬಲಡ್ಕ ಮಾತನಾಡಿ ‘ವಿಶ್ವ ಚೈತನ್ಯದ ಭಾಗವಾಗಿರುವ ನಾವುಗಳು ಬಾಳಿ ಬದುಕಬೇಕಾದವರು. ನಾವು ಚರಿತ್ರೆಯ ರಾಜರುಗಳ ಬಗ್ಗೆ ಅವರ ಜೀವನ ಶೈಲಿ ಬಗ್ಗೆ ಚರ್ಚೆ ಮಾಡಿ ಟಿಪ್ಪು,ಸಾವರ್ಕರ್ ಎಂದು ಜಗಳ ಮಾಡುವುದನ್ನು ಬಿಟ್ಟು ಭವಿಷ್ಯದ ಸುಂದರ ದೇಶದ ಬಗ್ಗೆ ಆಲೋಚನೆ ಮಾಡಬೇಕಾಗಿದೆ.ಗತಿಸಿದ ಇತಿಹಾಸವನ್ನು ನೆನೆದು ಕೋಮು ಸಂಘರ್ಷಕ್ಕೆ ಒಳಗಾಗುವುದಾರೂ ಯಾಕೆ,ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ ಅಲ್ಲಿ ಹೇಗೆ ಒಟ್ಟಾಗುತ್ತಾರೋ ಹಾಗೆಯೇ ಇಲ್ಲಿ ನಾವು ಒಟ್ಟಾಗಬೇಕಾಗಿದೆ.ಜಾತಿ ಜಾತಿಗಳ ಬಗ್ಗೆ ಸಂಘರ್ಷ ಮಾತನಾಡುವ ನಾಯಕ ಹಿಂದೂವಾದರೂ,ಮುಸಲ್ಮಾನನಾದರೂ ಅವರ ವಿರುದ್ದ ಎಲ್ಲರೂ ಒಟ್ಟಾಗಿ ಪ್ರಶ್ನೆ ಮಾಡುವ ಧೈರ್ಯ ನಾವು ರೂಡಿಸಿ ಕೊಳ್ಳಬೇಕು ಎಂದು ಹೇಳಿದರು. ಮೌಲ್ಯಗಳಿಂದ ಬದುಕೋಣ ಅಕಾರಗಳಿಂದ ಬೇಡ.ಹೆಸರಿನ ಆಸೆ ಇರುವವರಷ್ಟೆ ಸಂಘರ್ಷವನ್ನು ಉಂಟು ಮಾಡವವರು ಎಂದು ಹೇಳಿದರು.

ಮತ್ತೋರ್ವ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಪ್ರೊ. ಡಿ ಜವರೇಗೌಡ ಮಾತನಾಡಿ ‘ಭಾರತ ಧರ್ಮದ ಹಣೆಪಟ್ಟಿಯಲ್ಲಿರಬಾರದು. ಭಾರತದ ಉಜ್ವಲ ಸಮಸ್ಯೆ ಕೋಮು ಸಂಘರ್ಷವಾಗಿದೆ ಅಗಲಿದ ಹಿರಿಯರಿಗೆ. ಗೌರವ ದೊರೆಯಲು ಪರಸ್ಪರ ಸಾಮರಸ್ಯದಿಂದ ಬದುಕಬೇಕಾಗಿದೆ. ಮತಕ್ಕಾಗಿ ಜಗಳ ಸಲ್ಲದು.ಕಾಲಗಳು ಬದಲಾಗಿದೆ.ಪ್ರಸ್ತುತ ಸಂಧರ್ಭದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ವೈದ್ಯರುಗಳು, ಇಂಜಿನಿಯರ್ ಗಳು ಆಗುತ್ತಿದ್ದಾರೆ ಇದು ಮುಂದುವರಿಯಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜಕೀಯ,ಸಾಮಾಜಿಕ ಮುಖಂಡ ಧನಂಜಯ ಅಡ್ಪಂಗಾಯ ಮಾತನಾಡಿ ‘ರಾಜಕೀಯ ಮತ್ತು ಹಣದಾಸೆಗೆ ಸೌಹಾರ್ಧ ಕೆಡಿಸುವ ಕೆಲಸವಾಗುತ್ತಿದೆ. ಅಜ್ಜಾವರದಲ್ಲಿ ಸೌಹಾರ್ದತೆ ಉಳಿದಿದೆ ಎಂದರೆ , ಇಲ್ಲಿಯೂ ಗಾಂಧೀ, ಬಸವಣ್ಣ, ಅಂಬೇಡ್ಕರ್ ಗುಣದವರು ಇದ್ದಾರೆ ಎಂದೇ ಅರ್ಥ ಎಂದು ಹೇಳಿದರು.

ಖತೀಬರಾದ ಬಹು ಹಸೈನಾರ್ ಫೈಝಿ ಕೊಡಗು ರವರು ದುವಾ ನೆರವೇರಿಸಿದರು.
ವೇದಿಕೆಯಲ್ಲಿ ಸೈಯದ್ ಹುಸೈನ್ ತಂಙಳ್ ಆದೂರು,ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್, ಉಪಾಧ್ಯಕ್ಷ ಅಂದಹಾಜಿ,ಕೋಶಾಧಿಕಾರಿ ಶರೀಫ್ ರಿಲೇಕ್ಸ್, ಅಬ್ದುಲ್ಲ ಪಳ್ಳಿಕೆರೆ,ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು, ಮೊದಲಾದವರು ಉಪಸ್ಥಿತರಿದ್ದರು.

ಶಾಫಿ ದಾರಿಮಿ ಸ್ವಾಗತಿಸಿ ಅಬ್ದುಲ್ ರಜ್ಜಾಕ್ ಕೆ ಎಚ್ ಕಾರ್ಯಕ್ರಮ ನಿರೂಪಿಸಿ ರಫೀಕ್ ವಂದಿಸಿದರು.

ಸಭೆಯಲ್ಲಿ ಸ್ಥಳೀಯ ಮುಖಂಡರುಗಳಾದ ಪ್ರಸಾದ್ ರೈ, ರಂಜಿತ್ ರೈ, ಭಾಸ್ಕರ್ ರೈ, ಮಹಮ್ಮದ್ ಇಕ್ಬಾಲ್ ಎಲಿಮಲೆ, ನ ಪಂ ಸದಸ್ಯ ಉಮ್ಮರ್ ಕೆ ಎಸ್ ಮೊದಲಾದವರು ಭಾಗವಹಿಸಿದ್ದರು.