ವಿಧಾನ ಪರಿಷತ್ ಸದಸ್ಯರಲ್ಲಿ ಶಿಸ್ತಿನ ಕೊರತೆ ಕಾಣುತ್ತಿದೆ : ಸಭಾಪತಿ ಬಸವರಾಜ್ ಹೊರಟ್ಟಿ

0

ಸುಮಾರು ೪೫ ವರ್ಷಗಳಿಂದ ವಿಧಾನಸಭಾ ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಆವತ್ತಿಗೆ ಮತ್ತು ಈವತ್ತಿಗೆ ಹೋಲಿಸಿದರೆ ಆಧುನಿಕ ಸಮಯದಲ್ಲಿ ಸದಸ್ಯರಲ್ಲಿ ಶಿಸ್ತಿನ ಕೊರತೆಯನ್ನು ಕಾಣುತ್ತಿದ್ದೇನೆ.ರಾಜಕೀಯ ಹೊಲಸಿನಿಂದ ಕೂಡಿದೆ ಜವಬ್ದಾರಿ ಮತ್ತು ಶಿಸ್ತು ಇಲ್ಲ. ಸದನಗಳು ಯಾವ ರೀತಿ ಶಿಸ್ತಿನಿಂದ ನಡೆಯಬೇಕೋ ಆ ರೀತಿ ನಡೆಯುತ್ತಿಲ್ಲ.ಇದರಿಂದಾಗಿ ಮನಸಿಗೆ ತುಂಬಾ ನೋವಾಗಿತ್ತು ಎಂದು ವಿಧಾನಪರಿತ್ ಸಭಾಪತಿ ಬಸವರಾಜ ಹೊರಟ್ಟಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುದ್ದಿಗಾರರೊಂದಿಗೆ ಮಾಡುತ್ತಾ ಹೇಳಿದರು.

ಜೀವನದಲ್ಲಿ ಹೆಚ್ಚು ಕಾಲ ವಿಧಾನ ಪರಿಷತ್‌ನಲ್ಲಿ ಕಾಲ ಕಳೆದಿದ್ದೇನೆ. ಈ ಹಿಂದೆ ಹೀಗೆ ಇರಲಿಲ್ಲ ಇದೀಗ ಕಾಲ ಕೆಟ್ಟು ಹೋಗಿದೆ. ಆದುದರಿಂದ ಬೇಸರಗೊಂಡು ನಾನು ಸಭಾಪತಿ ಸ್ಥಾನ ಸೇರಿದಂತೆ ಸದಸ್ಯತನಕ್ಕೆ ರಾಜಿನಾಮೆ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದೆ. ರಾಜ್ಯಪಾಲರು ಸೇರಿದಂತೆ ಅನೇಕ ಹಿರಿಯರು ನನ್ನ ನಿರ್ಧಾರವನ್ನು ಬದಲಾಯಿಸಬೇಕು ಎಂದು ಹೇಳಿದ ಕಾರಣ ಅವರ ಮಾತಿಗೆ ಬೆಲೆ ನೀಡಿ ನನ್ನ ರಾಜಿನಾಮೆ ನಿರ್ಧಾರವನ್ನು ಹಿಂಪಡೆದಿದ್ದೇನೆ ಎಂದರು.

ರಾಜಕೀಯ ಪರಿಸ್ಥಿತಿ ಸುಧಾರಣೆಯಾಗಬೇಕು. ಪ್ರಾಮಾಣಿಕವಾಗಿ ಮತದಾನ ಮಾಡಿ ಉತ್ತಮ ನಾಯಕನ್ನು ಆಯ್ಕೆ ಮಾಡುವತ್ತ ಸ್ವತಃ ಜನರು ಮನಸು ಮಾಡಬೇಕಾಗಿದೆ.ಇದರಿಂದ ಪ್ರಜಾಪ್ರಭುತ್ವ ಬೆಳೆಯಬೇಕು. ಮುಂದೆ ರಾಜ್ಯ ಪ್ರಗತಿಯಾಗಬೇಕು.ರಾಜ್ಯದ ಅಭಿವೃದ್ಧಿಗೆ ಬೇಕಾದ ಉತ್ತಮ ಚರ್ಚೆಗಳು ವಿಧಾನ ಪರಿಷತ್‌ನಲ್ಲಿ ನಡೆಯಬೇಕೆನ್ನುವುದು ನನ್ನ ಅಭಿಪ್ರಾಯ ಎಂದು ನುಡಿದರು.


ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದು ಮೂರು ದಿನ ಆಯಿತು. ಮನಸಿಗೆ ನೆಮ್ಮದಿ ಮತ್ತು ಶಾಂತಿ ಇಲ್ಲಿ ಸಿಕ್ಕಿದೆ. ಇಲ್ಲಿನ ಪರಿಸರ ಪವಿತ್ರ ಸನ್ನಿಧಾನ ಮತ್ತು ಶ್ರೀ ದೇವಳದಲ್ಲಿ ಎರಡು ದಿನಗಳಿಂದ ಇರುವುದರಿಂದ ಒಂದು ರೀತಿಯ ವಿಶೇಷ ಮಾನಸಿಕ ಶಾಂತಿ ದೊರಕಿದೆ. ಇಲ್ಲಿಂದ ತೆರಳಲು ಮನಸಿಲ್ಲ. ಆದರೆ ಅನಿವಾರ್ಯ ತೆರಳಲೇ ಬೇಕು. ಆದರೆ ಮುಂದೆ ಆಗಾಗ ಕ್ಷೇತ್ರಕ್ಕೆ ಬಂದು ಒಂದೆರಡು ದಿನ ಇಲ್ಲಿ ಕಾಲ ಕಳೆಯಲು ನಿರ್ಧರಿಸಿದ್ದೇನೆ ಎಂದು ಬಸವರಾಜ ಹೊರಟ್ಟಿ ನುಡಿದರು.


ಹಿಂದೆ ಶಿಕ್ಷಣ ಸಚಿವನಾಗಿ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೇನೆ.ಇದೀಗ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಈಗ ಯಾರನ್ನು ಕೂಡಾ ಪೈಲ್ ಮಾಡುವ ವ್ಯವಸ್ಥೆ ಇರುವುದಿಲ್ಲ. ಪರೀಕ್ಷೆಯಲ್ಲಿ ಪಾಸಾಗಲಿ ಅಥವಾ ನಾಪಾಸಗಲಿ ಅಂತವರನ್ನು ಪಾಸು ಮಾಡುವ ವ್ಯವಸ್ಥೆ ಬಂದಿದೆ. ಇದರಿಂದಾಗಿ ಮಕ್ಕಳ ಭವಿಷ್ಯಕ್ಕೆ ತೊಂದರೆ ಉಂಟಾಗುತ್ತದೆ. ಪಾಸಾದವರನ್ನು ಪಾಸು ಮಾಡುವ ಮತ್ತು ಪೈಲ್ ಆದವರನ್ನು ಪೈಲು ಮಾಡುವ ವ್ಯವಸ್ಥೆ ಮತ್ತೆ ಜಾರಿಗೆ ಬರಬೇಕು. ಪೈಲ್ ಆದವರಿಗೆ ಮತ್ತೆ ಪರೀಕ್ಷೆ ನಡೆಸಬೇಕು. ಆಗ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಶಿಸ್ತಿನಿಂದ ಅಧ್ಯಾಯನ ಮಾಡಿ ಜ್ಞಾನ ಸಂಪಾದಿಸುತ್ತಾರೆ ಎಂದು ನುಡಿದರು.