ಜನರಿಗೆ ಸಮಸ್ಯೆಯಾಗುತ್ತಿದ್ದರೂ ಸುಳ್ಯ ನಗರ ಪಂಚಾಯತ್ ಮಾತ್ರ ಮೌನ
ಗುರುಂಪಿನಲ್ಲಿ ಹೂತು ಹೋದ ಲಾರಿ
ಸುಳ್ಯ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆ ವಹಿಸಿಕೊಂಡವರು ರಸ್ತೆ ಅಗೆದಿರುವುದನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಸಾರ್ವಜನಿಕರು ನಿರಂತರ ತೊಂದರೆ ಅನುಭವಿಸುತ್ತಿದ್ದಾರೆ.

ಸುಳ್ಯದ ಕುರುಂಜಿಗುಡ್ಡೆಯಿಂದ ಕೋರ್ಟ್ ತನಕದ ಕಾಂಕ್ರೀಟ್ ರಸ್ತೆಯನ್ನು ನಡುವಿನಿಂದ ಕತ್ತರಿಸಿ ಪೈಪ್ ಕಾಮಗಾರಿ ನಡೆಸಲಾಗಿದೆ. ಆದರೆ ಅಗೆದ ರಸ್ತೆಯನ್ನು ಸಮರ್ಪಕವಾಗಿ ಮುಚ್ಚದಿರುವುದರಿಂದ ವಾಹನ ಸವಾರರು ಕಷ್ಟಪಟ್ಟು ಸಂಚರಿಸಬೇಕಾಗಿದೆ.
ಗುರುಂಪು ಪ್ರದೇಶದಲ್ಲಿಯೂ ಇದೇ ಸಮಸ್ಯೆ. ಅಲ್ಲಿ ರಸ್ತೆ ಅಗೆತದ ಜತೆಗೆ ನೀರಿನ ಪೈಪ್ ಗಳು ಒಡೆದು ಸಮಸ್ಯೆಯಾಗುತ್ತಿದೆ. ಎ.4ರಂದು ಸಂಜೆ ಲಾರಿಯೊಂದು ಹೂತು ಹೋಗಿದ್ದು ಕೆಲ ಸಮಯ ರಸ್ತೆ ಬ್ಲಾಕ್ ಆಗಿತ್ತು
.
ರಸ್ತೆ ಸಮರ್ಪಕವಾಗಿ ಮುಚ್ಚದೇ ಸಾರ್ವಜನಿಕರು ಅನುಭವಿಸುವ ಸಮಸ್ಯೆಯನ್ನು ಈ ಭಾಗದ ಜನಪ್ರತಿನಿಧಿಗಳ ಗಮನಕ್ಕೆ, ನ.ಪಂ. ಮುಖ್ಯಾಧಿಕಾರಿಗಳು, ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು, ಇಂಜಿನಿಯರ್ ರವರ ಗಮನಕ್ಕೆ ತಂದರೂ ಪ್ರಯೋಜನ ವಾಗಿಲ್ಲ.
ಈ ಕುರಿತು ಶಾಸಕರು, ಇಲಾಖೆಗಳ ಮೇಲಧಿಕಾರಿಗಳು ಗಮನ ಹರಿಸುವರೋ ಕಾದುನೋಡಬೇಕಾಗಿದೆ.
ಅಲ್ಲಲ್ಲಿ ರಸ್ತೆಯನ್ನು ಕತ್ತರಿಸಲಾಗಿದ್ದು ಸರಿ ಪಡಿಸುವುದಾಗಿ ನ.ಪಂ. ಸಭೆಯಲ್ಲಿ ಒಪ್ಪಿಕೊಳ್ಳುತ್ತಿರುವ ಇಂಜಿನಿಯರ್ ಈ ಬಗ್ಗೆ ಮತ್ತೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.