ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜು ಪದವಿ ಪ್ರದಾನ ಸಮಾರಂಭ

0

ವಿಶ್ವವಿದ್ಯಾಲಯ ಕುಲಪತಿ ಡಾ.ಅಚಲ್ ಗುಲಾಟಿಯವರಿಂದ ಘಟಿಕೋತ್ಸವ ಭಾಷಣ ಹಾಗೂ ಪದವಿ ಪ್ರದಾನ

ಸುಳ್ಯ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕುರುಂಜಿಭಾಗ್ ಇದರ ಆಶ್ರಯದಲ್ಲಿ ವೈದ್ಯಕೀಯ ಕಾಲೇಜಿನ 2019 ರ ಬ್ಯಾಚಿನ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವೈದ್ಯಕೀಯ ಪದವಿ ಪ್ರದಾನ ಸಮಾರಂಭ ಏಪ್ರಿಲ್ 5 ರಂದು ಕೆವಿಜಿ ಆಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಇದರ ಅಧ್ಯಕ್ಷರು ಹಾಗೂ ಕುಲಪತಿ ಡಾ.ಅಚಲ್ ಗುಲಾಟಿಯವರು ಭಾಗವಹಿಸಿ ಘಟಿಕೋತ್ಸವ ಭಾಷಣವನ್ನು ನಿರ್ವಹಿಸಿ ವೈದ್ಯರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ನೂತನ ವೈದ್ಯರುಗಳಿಗೆ ಹಿತವಚನವನ್ನು ನೀಡಿದ ಡಾ. ಗುಲಾಟಿಯವರು ” ಕೆವಿಜಿ ಸಂಸ್ಥೆಯು ಡಾ. ಕುರುಂಜಿ ವೆಂಕಟ್ರಮಣ ಗೌಡರ ಅಗಾಧವಾದ ಚಿಂತನೆ ಮತ್ತು ಶ್ರಮದಿಂದ ಈ ಭಾಗದಲ್ಲಿ ಬೆಳೆದು ನಿಂತಿದೆ. ಆಡಳಿತ ಮಂಡಳಿಯ ಪ್ರಯತ್ನದ ಫಲದಿಂದ ಈ ಸಂಸ್ಥೆಯು ದೇಶದಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಬೆಳೆದು ಬರುತ್ತಿದೆ. ಸುಳ್ಯ ಮಾತ್ರವಲ್ಲದೆ ಜಿಲ್ಲೆ ಹಾಗೂ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಕೆವಿಜಿ ಸಂಸ್ಥೆಯು ಹೆಸರುವಾಸಿಯಾಗಿದೆ. ಈ ಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು ವೈದ್ಯರಾಗಿ ತಮ್ಮ ಜೀವನವನ್ನು ರೂಪಿಸುವ ಅವಕಾಶವನ್ನು ಕಲ್ಪಿಸಿದೆ.

ಆದ್ದರಿಂದ ಈ ಸಂಸ್ಥೆಯಲ್ಲಿ ಕಲಿತು ಈ ಬಾರಿ ಪದವಿಯನ್ನು ಪಡೆದುಕೊಂಡಿರುವ ಎಲ್ಲಾ ವೈದ್ಯರುಗಳು ಮುಖ್ಯವಾಗಿ ತಿಳಿಯಬೇಕಾದ ಅಂಶ ಎಂದರೆ ಕಲಿಕೆ ಎಂಬುದು ನಿರಂತರವಾಗಿ ನಡೆಯುವಂತದ್ದು. ಕಲಿಕೆಗೆ ಕೊನೆ ಎಂಬುದಿಲ್ಲ. ಪ್ರತಿಯೊಬ್ಬರೂ ನಾನು ನನ್ನದು ಎಂಬ ಅಹಂ ಅನ್ನು ಬಿಟ್ಟು ತಮ್ಮ ತಮ್ಮ ಪೋಷಕರಿಗೆ ಉತ್ತಮ ಮಕ್ಕಳಾಗಿ, ಶಿಕ್ಷಕರಿಗೆ ಉತ್ತಮ ವಿದ್ಯಾರ್ಥಿಯಾಗಿ, ರೋಗಿಗಳಿಗೆ ಉತ್ತಮ ವೈದ್ಯರಾಗಿ ಬೆಳೆಯಬೇಕಾಗಿದೆ. ಆಕಾಶವನ್ನು ಮುಟ್ಟುವ ಹಂಬಲ ಎಲ್ಲರಲ್ಲೂ ಇರುತ್ತದೆ. ಆದರೆ ಆಕಾಶವನ್ನು ಸೃಷ್ಟಿಸಿದ ದೇವನೊಬ್ಬ ಇದ್ದಾನೆ ಎಂಬ ಚಿಂತನೆ ಕೂಡ ನಮ್ಮಲ್ಲಿ ಇರಬೇಕು” ಎಂದರು. ” ಹೃದಯದಿಂದ ಚಿಂತಿಸಿ ಮೆದುಳಿನಿಂದ ಕೆಲಸ ಮಾಡುವ ಶಕ್ತಿಯನ್ನು ಪ್ರತಿಯೊಬ್ಬರೂ ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರ ಪ್ರತಿಯೊಬ್ಬರೂ ಯಶಸ್ಸು ಕಾಣಲು ಸಾಧ್ಯ” ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ.ಚಿದಾನಂದರು ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಇದರ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ, ನಿರ್ದೇಶಕಿ ಡಾ.ಐಶ್ವರ್ಯ ಕೆ.ಸಿ., ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ಉಪನ್ಯಾಸಕರುಗಳಾದ ಡಾ.ರಾಮಚಂದ್ರ ಭಟ್, ಡಾ. ಸುಬ್ರಹ್ಮಣ್ಯ, ಡಾ.ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

ಡೀನ್ ಡಾ. ನೀಲಾಂಬಿಕೈ ನಟರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.