ಸುಳ್ಯದಲ್ಲಿ ಹೈನುಗಾರಿಕೆಯಿಂದ 12,000 ಲೀ. ಸಂಗ್ರಹ ವಾಗುತ್ತಿದೆ. ಹಾಲಿನ ಉತ್ಪನ್ನ ತಯಾರಿಸಿ ಮಾರಾಟ ಮಾಡಿ ಬಂದ ಲಾಭದಲ್ಲಿ ಪ್ರತೀ 10 ದಿನಗಳಲ್ಲಿ ಹೈನುಗಾರ ರೈತರಿಗೆ ಲಾಭಾಂಶ ವಿತರಿಸಲಾಗುತ್ತಿದೆ. ಕೊರೋನಾ ಬಂದ ಸಂದರ್ಭದಲ್ಲಿ ಅನೇಕರನ್ನು ಕೈಹಿಡಿದಿರುವುದು ಹೈನುಗಾರಿಕೆ. ಆ ಸಂದರ್ಭದಲ್ಲಿ ನಗರ ಪಟ್ಟಣಗಳಲ್ಲಿದ್ದವರು ಊರಿಗೆ ಬಂದು ಹೈನುಗಾರಿಕೆ ಮಾಡಿದ ಕಾರಣ ಹಾಲಿನ ಉತ್ಪಾದನೆಯೂ ಹೆಚ್ಚಾಗಿತ್ತು. ಕೊರೋನಾ ಕಡಿಮೆ ಯಾದ ಬಳಿಕ ಹಾಲಿನ ಉತ್ಪಾದನೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕಲ್ಮಕಾರು ಭಾಗದಲ್ಲಿ ಅಡಿಕೆ ಹಳದಿ ರೋಗ, ಎಲೆ ಚುಕ್ಕಿರೋಗ ಬಂದ ಕಾರಣ ಅನೇಕರು ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ. ಹೈನುಗಾರಿಕೆಯಲ್ಲಿ ಹಸಿರು ಮೇವಿಗೆ ಹೆಚ್ಚು ಒತ್ತು ಕೊಡಿ ಎಂದು ದ.ಕ.ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಹೇಳಿದರು. ಅವರು ಕೊಲ್ಲಮೊಗ್ರ ದಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯ ದಲ್ಲಿ ಹೈನುಗಾರಿಕೆ ಮತ್ತು ಪಶುಸಂಗೋಪನೆ ಮಾಹಿತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.
ಹೈನುಗಾರರಿಗೆ ಸಿಗುವ ಮಾಹಿತಿಗಳ ಬಗ್ಗೆ ವಿವರಿಸಿದ ಅವರು ಮಿನಿ ಡೈರಿ ಯೋಜನೆ, ಹೆಣ್ಣು ಕರು ಸಾಕಾಣೆ ಯೋಜನೆ, ಹಸಿರು ಹುಲ್ಲು ಬೆಳೆಯಲು ಅನುದಾನ ಸೇರಿದಂತೆ ಸಿಗುವ ಅನುದಾನದ ಬಗ್ಗೆ ವಿವರಿಸಿದರು.
ಬಾಳುಗೋಡಿನಲ್ಲಿ ಹಾಲು ಉ.ಸ.ಸಂಘ ನಿರ್ಮಿಸಿರುವ ಬಗ್ಗೆ ಮಾತನಾಡಿದ ಅವರು
ಕೊಲ್ಲಮೊಗ್ರದಲ್ಲಿ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡ ನಿರ್ಮಾಣ ಮಾಡಲು ಸ್ಥಳದ ಸಮಸ್ಯೆಯ ಬಗ್ಗೆಯೂ ಗಮನ ಸೆಳೆದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಡಪ್ಪಾಡಿ ಗ್ರಾಮವಾಸ್ತವ್ಯ ದ ರೂವಾರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ತೇಜೇಶ್ವರ್ ಕುಂದಲ್ಪಾಡಿ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಕಾರ್ಯಕ್ರಮ ನಿರೂಪಿಸಿದರು.